ಪಣಜಿ: ಆಕ್ರಮಣಕಾರಿ ತಳಿ ನಾಯಿ ಸಾಕಣೆ ನಿಷೇಧಕ್ಕೆ ಚಿಂತನೆ ನಡೆಸಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ವಿಶ್ವ ರೇಬಿಸ್ ದಿನದಂದು ಮಾತನಾಡಿದ ಅವರು, ಜನರ ಸುರಕ್ಷತೆ ದೃಷ್ಟಿಯಿಂದ ಕೆಲವು ಆಕ್ರಮಣಕಾರಿ ನಾಯಿಗಳ ತಳಿ ಸಾಕಣೆ ನಿಷೇಧಿಸುವ ಕುರಿತು ಚಿಂತನೆ ನಡೆಸಲಾಗಿದೆ. ಕೆಲವು ತಳಿಗಳ ನಾಯಿಗಳು ತೀರಾ ಆಕ್ರಮಣಕಾರಿಯಾಗಿದ್ದು, ಜನರ ಮೇಲೆ ದಾಳಿ ಮಾಡುತ್ತವೆ. ಇಂತಹ ನಾಯಿಗಳನ್ನು ಕೆಲವರು ಸಾಕುತ್ತಾರೆ. ಆದರೆ, ಲಸಿಕೆ ಹಾಕಿಸುವುದಿಲ್ಲ. ಹೀಗಾಗಿ ಕೆಲವು ಆಕ್ರಮಣಕಾರಿ ತಳಿ ನಾಯಿ ನಿಷೇಧಕ್ಕೆ ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಜನರು ತಮ್ಮ ಸಾಕು ನಾಯಿಗಳಿಗೆ ಲಸಿಕೆ ಹಾಕುವಂತೆ ಒತ್ತಾಯಿಸಿದ ಸಾವಂತ್, ಜನರು ಇತರ ರಾಜ್ಯಗಳಿಂದ ನಾಯಿಗಳನ್ನು ತರುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ನಿಯಮಿತವಾಗಿ ನಾಯಿಗಳಿಗೆ ಲಸಿಕೆ ಹಾಕಬೇಕು ಎಂದು ಹೇಳಿದರು.