ಪಣಜಿ: ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಅನೇಕ ರಾಜ್ಯಗಳಲ್ಲಿ ನೆರವು ಘೋಷಿಸಲಾಗಿದೆ. ಕೋವಿಡ್ ನಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಕೇಂದ್ರ ಸರ್ಕಾರ ಹಾಗೂ ಅನೇಕ ರಾಜ್ಯಗಳಲ್ಲಿ ಯೋಜನೆ ರೂಪಿಸಲಾಗಿದೆ.
ಗೋವಾ ಸರ್ಕಾರ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ತಲಾ 2 ಲಕ್ಷ ರೂ ಸಹಾಯಧನ ನೀಡುವುದಾಗಿ ಘೋಷಿಸಿದ್ದು, ಇದರೊಂದಿಗೆ ಕೇಂದ್ರ ಸರ್ಕಾರದ ಸಹಾಯಧನ ಕೂಡ ಸಿಗಲಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಷ್ಟಕ್ಕೆ ಸಿಲುಕಿದ ಮೃತ ವ್ಯಕ್ತಿ ಕುಟುಂಬದವರೆಗೆ ನೆರವಾಗಲಿದೆ. ಗೋವಾ ರಾಜ್ಯದಲ್ಲಿ ಕರ್ಫ್ಯೂ ಜಾರಿಯಾದ ನಂತರ ಕೊರೋನಾ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಇಳಿಕೆಯಾಗಿದೆ. ರಾಜ್ಯದಲ್ಲಿ ಜಾರಿಯಾದ ಎಲ್ಲ ಸರ್ಕಾರಿ ಯೋಜನೆಗಳು ಪ್ರಗತಿಯಲ್ಲಿವೆ. ಯಾವುದೇ ಯೋಜನೆಯನ್ನು ಸ್ಥಗಿತಗೊಳಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
‘ಮುಖಮಂತ್ರಿ ಅನಾಥ ಆಧಾರ್ ಯೋಜನೆ’ ಎಂಬ ಮತ್ತೊಂದು ಯೋಜನೆಯನ್ನು ಪ್ರಾರಂಭಿಸಲಾಗುವುದು, ಇದರ ಅಡಿಯಲ್ಲಿ ಅನಾಥ ಮಕ್ಕಳಿಗೆ ಮಾಸಿಕ ಆರ್ಥಿಕ ನೆರವು ದೊರೆಯುತ್ತದೆ ಎಂದು ತಿಳಿಸಿದ್ದಾರೆ.