
ಮೇ 7 ರಂದು ಮಂಗಳವಾರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮತದಾರರಿಗೆ ಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುವುದು. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಿದ್ದು. ಮತದಾರರು ನಿರ್ಭಿಡೆಯಿಂದ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಲು ಮನವಿ ಮಾಡಿಕೊಳ್ಳಲಾಗಿದೆ.
ಮಸ್ಟರಿಂಗ್ ಪ್ರಕ್ರಿಯೆ ಹಾಗೂ ಮತಗಟ್ಟೆಗಳ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಪೂಜಾರ ವೀರಮಲ್ಲಪ್ಪ ಭೇಟಿ ನೀಡಿ, ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಿದರು.
ಚುನಾವಣೆಯ ಅಂತಿಮ ಕಣದಲ್ಲಿ ಜಿ.ಜಿ. ಆನಂದಸ್ವಾಮಿ ಗಡ್ಡದೇವರಮಠ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಬಸವರಾಜ ಸೋಮಪ್ಪ ಬೊಮ್ಮಾಯಿ (ಭಾರತೀಯ ಜನತಾ ಪಾರ್ಟಿ), ಖಾಜಾಮೋಹಿದ್ದೀನ್ ಗುಡಗೇರಿ (ಸೋಷಿಯಾಲಿಸ್ಟ್ ಪಾರ್ಟಿ(ಇಂಡಿಯಾ), ಗಂಗಾಧರ ಬಡಿಗೇರ(ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ತನು ಸಿ ಯಾದವ್ (ಕರ್ನಾಟಕ ರಾಷ್ಟ ಸಮಿತಿ), ಹೆಚ್.ಕೆ. ನರಸಿಂಹಪ್ಪ (ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ), ಶ್ರೀಮತಿ ರಶೀದ ಬೇಗಂ, (ಇಂಡಿಯನ್ ಮೂಮೆಂಟ್ ಪಾರ್ಟಿ), ವಿಶ್ವನಾಥ ಶೀರಿ (ಏಕಂ ಸನಾತನ ಭಾರತ ದಳ), ಸಚಿನಕುಮಾರ ಕರ್ಜೆಕಣ್ಣನವರ (ಉತ್ತಮ ಪ್ರಜಾಕೀಯ ಪಾರ್ಟಿ), ಡಾ. ಗುರಪ್ಪ ಹೆಚ್.ಇಮ್ರಾಪೂರ (ಪಕ್ಷೇತರ), ಜಗದೀಶ ಬಂಕಾಪೂರ (ಪಕ್ಷೇತರ), ಬಸವರಾಜ ಹಾದಿ (ಪಕ್ಷೇತರ), ರುದ್ರಪ್ಪ ಕುಂಬಾರ (ಪಕ್ಷೇತರ) ಹಾಗೂ ಶ್ರೀಮತಿ ಸುನಂದಾ ಕರಿಯಪ್ಪ ಶಿರಹಟ್ಟಿ (ಪಕ್ಷೇತರ)ಅವರು ಒಳಗೊಂಡಂತೆ 14 ಅಭ್ಯರ್ಥಿಗಳು ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ.
* ಸುಗಮ ಮತದಾನಕ್ಕಾಗಿ ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ (ಹಾವೇರಿ-ಗದಗ ಜಿಲ್ಲೆ) 1982 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 1614 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಅಳವಡಿಸಲಾಗಿದೆ. 39 ದುರ್ಬಲ, 370 ಸೂಕ್ಷ್ಮ ಮತಗಟ್ಟೆಗಳು ಹಾಗೂ 12 ಆರ್ಥಿಕ ಸೂಕ್ಷ್ಮತೆ ಒಳಗೊಂಡ ಮತಗಟ್ಟೆಗಳೆಂದು ಗುರುತಿಸಲಾಗಿದೆ.
* ಮತಗಟ್ಟೆ ಸಿಬ್ಬಂದಿ: 6958 ಜನ ಮತದಾನ ಪ್ರಕ್ರಿಯೆ ವಿವಿಧ ಹಂತದ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಸುರಕ್ಷತೆ ಹಾಗೂ ಭದ್ರತೆಗಾಗಿ 2525 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡಂತೆ 9483 ಜನರನ್ನು ನಿಯೋಜಿಸಲಾಗಿದೆ ಹಾಗೂ ಮೂರು ಕೇರಳ ಪೊಲೀಸ್ ಪೋರ್ಸ್ ಪಡೆ ಕಾರ್ಯ ನಿರ್ವಹಿಸಲಿದೆ.
* ಮತದಾನ ಮಾಡಲು ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9,02,119 ಪುರುಷರು, 8,90,572 ಮಹಿಳೆಯರು ಹಾಗೂ 83 ಇತರರು ಸೇರಿದಂತೆ ಒಟ್ಟಾರೆ 17,92,774 ಮತದಾರರಿದ್ದಾರೆ. ಈ ಪೈಕಿ 57,577 ಪ್ರಥಮ ಬಾರಿಗೆ ಮತ ಚಲಾಯಿಸುವ ಯುವ ಮತದಾರರಿದ್ದಾರೆ. ವಿಧಾನಸಭಾ ಕ್ಷೇತ್ರವಾರು ವಿವರದಂತೆ ಶಿರಹಟ್ಟಿ ಕ್ಷೇತ್ರದಲ್ಲಿ 2,30,003, ಗದಗ ಕ್ಷೇತ್ರದಲ್ಲಿ 2,29,599, ರೋಣ ಕ್ಷೇತ್ರದಲ್ಲಿ 2,39,122, ಹಾನಗಲ್ ಕ್ಷೇತ್ರದಲ್ಲಿ 2,15,836, ಹಾವೇರಿ ಕ್ಷೇತ್ರದಲ್ಲಿ 2,38,387, ಬ್ಯಾಡಗಿ ಕ್ಷೇತ್ರದಲ್ಲಿ 2,12,567, ಹಿರೇಕೆರೂರು ಕ್ಷೇತ್ರದಲ್ಲಿ 1,88,208, ರಾಣೇಬೆನ್ನೂರು ಕ್ಷೇತ್ರದಲ್ಲಿ 2,39,052 ಮತದಾರರಿದ್ದಾರೆ.
ಮತಗಟ್ಟೆಗೆ ತೆರಳುವ ಮುನ್ನ ಜೊತೆಗೆ ಈ ದಾಖಗಳಿರಲಿ: ವೋಟರ್ ಸ್ಲೀಪ್ ಜೊತೆಗೆ ಭಾರತ ಚುನಾವಣಾ ಆಯೋಗದ ನೀಡಿರುವ ಎಪಿಕ್ ಕಾರ್ಡ್ ಇರಬೇಕು. ಒಂದೊಮ್ಮೆ ಎಪಿಕ್ ಕಾರ್ಡ್ ಇಲ್ಲದಿದ್ದರೆ ಚುನಾವಣಾ ಆಯೋಗ ಗುರುತಿಸಿರುವ ಪೋಟೋ ಸಹಿತ ಈ 12 ಗುರುತಿನ ಕಾರ್ಡ್ಗಳ ಪೈಕಿ ಯಾವುದಾದರೂ ಒಂದು ಕಾರ್ಡ್ ತೆಗೆದುಕೊಂಡು ಹೋಗಿ ಮತ ಹಾಕುವುದು ಕಡ್ಡಾಯ.
ಆದಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಭಾವಚಿತ್ರವಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿ ನೀಡಿರುವ ಪಾಸ್ ಪುಸ್ತಕ, ಕಾರ್ಮಿಕ ಇಲಾಖೆ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ಆರ್.ಜಿ.ಐ.ಯೋಜನೆಯಡಿ ಎನ್ಪಿಆರ್ ಸ್ಕೀಂ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಪೋಟೋ ಸಹಿತ ಪಿಂಚಣಿ ದಾಖಲೆಗಳು, ಕೇಂದ್ರ, ರಾಜ್ಯ ಸರ್ಕಾರ, ಸಾರ್ವಜನಿಕ ಉದ್ಯಮಗಳಲ್ಲಿ ಕೆಲಸಮಾಡುವ ನೌಕರರಿಗೆ ನೀಡಿರುವ ಭಾವಚಿತ್ರ ಸಹಿತ ಸೇವಾ ಗುರುತಿನ ಕಾರ್ಡ್, ಸಂಸದ, ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರ ಅಧಿಕೃತ ಗುರುತುಪತ್ರಗಳು, ಕೇಂದ್ರ ಸಮಾಜ ಕಲ್ಯಾಣ ಹಾಗೂ ಸಬಲೀಕರಣ ಇಲಾಖೆ ನೀಡಿರುವ ವಿಶೇಷ ಚೇತನರ ಗುರುತು ಪತ್ರಗಳ ಪೈಕಿ ಯಾವುದಾದರೂ ಒಂದು ಕಾರ್ಡ್ ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ಮತಪಟ್ಟಿಯಲ್ಲಿ ಹೆಸರು ಇದ್ದರೆ ಮತದಾನ ಮಾಡಬಹುದು.
* ಮತದಾನಕ್ಕೆ ರಜೆ: ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ಅವಧಿ ನಿಗಧಿಪಡಿಸಲಾಗಿದೆ. ಮತದಾನ ಮಾಡಲು ಅನುಕೂಲವಾಗುವಂತೆ ಮೇ 07 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.
* ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಮತದಾನದ ದಿನದಂದು ಕಾಯ್ದೆಯನ್ವಯ ಅರ್ಹ ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಲು ಈಗಾಗಲೇ ಕಾರ್ಮಿಕ ಇಲಾಖೆ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಮತಗಟ್ಟೆಯಲ್ಲಿ ಸೌಲಭ್ಯ:
* ಕುಡಿಯುವ ನೀರಿನ ಸೌಲಭ್ಯ, ನೆರಳಿನ ಸೌಲಭ್ಯ, ವಿಕಲಚೇತನರಿಗೆ, ಹಿರಿಯ ಮತದಾರರಿಗೆ ಅನುಕೂಲವಾಗಲು ರ್ಯಾಂಪ್ ವ್ಯವಸ್ಥೆ ಹಾಗೂ ವ್ಹೀಲ್ ಚೇರ್ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ, ಮಕ್ಕಳ ಪಾಲನಾ ಕೇಂದ್ರ, ಬೂತ್ಕನ್ನಡಿ, ಸೆಲ್ಫಿ ಕಾರ್ನರ್ ವ್ಯವಸ್ಥೆ ಮಾಡಲಾಗಿದೆ.
ಮತಗಟ್ಟೆ ವ್ಯಾಪ್ತಿಯಲ್ಲಿ ಈ ಚಟುವಟಿಕೆ ನಿಷೇಧ: ಅಭ್ಯರ್ಥಿಯ ಅಥವಾ ರಾಜಕೀಯ ಪಕ್ಷದ ಹೆಸರು ಮತ್ತು ಚಿಹ್ನೆಯನ್ನೊಳಗೊಂಡ ಮತದಾರರ ಚೀಟಿಯನ್ನು ನೀಡಲು ಅವಕಾಶವಿಲ್ಲ.
* ಮತಗಟ್ಟೆ ವ್ಯಾಪ್ತಿಯ 100 ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ಸಂಬಂಧಿ ಪೋಸ್ಟರ್/ಬ್ಯಾನರ್ ಹಾಕುವಂತಿಲ್ಲ,
* ಮತಗಟ್ಟೆಯಿಂದ 200 ಮೀ. ಒಳಗಡೆ ಚುನಾವಣಾ ಕರ್ತವ್ಯ ನಿರತ ವಾಹನ ಹೊರತುಪಡಿಸಿ, ಇತರೆ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆ ನಿಷೇಧಿಸಿದೆ.
* ಅಭ್ಯರ್ಥಿ ಹಾಗೂ ಅಭ್ಯರ್ಥಿಯ ಪರ ಏಜೆಂಟರು ಮತದಾನಕ್ಕೆ ವಾಹನದಲ್ಲಿ ಮತದಾರರನ್ನು ಮನೆಯಿಂದ ಮತಗಟ್ಟೆಗೆ ಕರೆತರುವುದು ಮತ್ತು ಮರಳಿ ಕರೆದೊಯ್ಯಲು ಅವಕಾಶ ಇರುವುದಿಲ್ಲ.
* ಮತದಾನಕ್ಕೆ ಬರುವ ಖಾಸಗಿ, ವೈಯಕ್ತಿಕ ವಾಹನಗಳು ಮತಗಟ್ಟೆಯಿಂದ 200 ಮೀಟರ್ ಹೊರಗಿರಬೇಕು.
* ಅನುಮತಿಸಲಾದ ವಾಹನಗಳ ಬಳಕೆಗೆ ಮಾತ್ರ ಅವಕಾಶ. ಆದರೆ ಈ ವಾಹನಗಳಲ್ಲಿ ಮತದಾರರನ್ನು ಕರೆತರುವಂತಿಲ್ಲ.
* ಮತಗಟ್ಟೆಯ 100 ಮೀಟರುಗಳ ಅಂತರದೊಳಗಿರುವ ಯಾವುದೇ ಸಾರ್ವಜನಿಕ, ಧಾರ್ಮಿಕ ಅಥವಾ ಖಾಸಗಿ ಸ್ಥಳಗಳಲ್ಲಿ ಪ್ರಚಾರ ನಡೆಸುವಂತಿಲ್ಲ. ಧ್ವನಿವರ್ಧಕಗಳ ಬಳಕೆ ಮಾಡುವಂತಿಲ್ಲ.
* ಅನುಮತಿಸಲಾದ ಬೂತ್ಗಳಿಗೆ ಮಾತ್ರ ಅವಕಾಶ. ಬೂತ್ಗಳಿಗೆ ಅನುಮತಿ ಪಡೆದ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಚುನಾವಣಾ ಬೂತ್ ಮತಗಟ್ಟೆಯಿಂದ 200 ಮೀಟರ್ ವ್ಯಾಪ್ತಿಯ ಹೊರಗಿರಬೇಕು.
* ಮೊಬೈಲ್ ಪೋನ್, ಕಾರ್ಡಲೆಸ್ ಫೋನ್ಗಳನ್ನು ಮತಗಟ್ಟೆಯಲ್ಲಿ ಬಳಸುವಂತಿಲ್ಲ. ಮತಗಟ್ಟೆಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ.
* ನಿಷೇಧಾಜ್ಞೆ: ಸುಗಮವಾಗಿ ಮತ್ತು ಮುಕ್ತ ಮತದಾನ ಪ್ರಕ್ರಿಯೆಗಾಗಿ ಸಿಆರ್ಪಿಸಿ 1973 ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲೆಯಾದ್ಯಂತ ಮೇ 5ರ ಸಂಜೆ 6 ಗಂಟೆಯಿಂದ ಮೇ 8ರ ಬೆಳಿಗ್ಗೆ 6 ಗಂಟೆವರೆಗೆ ಹಾಗೂ ಜೂನ್ 4ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 5ರ ಬೆಳಿಗ್ಗೆ 6 ಗಂಟೆವರೆಗೆ ಮದ್ಯ ಮಾರಾಟ ಮತ್ತು ಮದ್ಯಪಾನ ನಿಷೇಧಿಸಲಾಗಿದೆ. ಹಾಗೂ ಈ ದಿನ ನಡೆಯುವ ಸಂತೆಗಳನ್ನು ಮುಂದೂಡಲಾಗಿದೆ.