ನೀವು ರಾಜಕಾರಣದಲ್ಲಿರುವುದನ್ನು ಬಿಟ್ಟು ಮನೆಗೆ ಹೋಗಿ ಮತ್ತು ಅಡುಗೆ ಮಾಡಿ ಎಂದು ಎನ್ ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರ ಬಗ್ಗೆ ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಅವರು ವಿವಾದದ ಬಿರುಗಾಳಿಯನ್ನು ಎಬ್ಬಿಸಿದ್ದಾರೆ.
ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿಗೆ ಆಗ್ರಹಿಸಿ ಬುಧವಾರ ಬಿಜೆಪಿ ಘಟಕ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಪಾಟೀಲ್ ಈ ವಿವಾದಿತ ಹೇಳಿಕೆ ನೀಡಿದ್ದರು.
ಸುಳೆಯವರು ದೆಹಲಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ್ದರು. ಆದರೆ, ಮೀಸಲಾತಿಗೆ ಸಂಬಂಧಿಸಿದಂತೆ ಏನು ಚರ್ಚೆ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಲಿಲ್ಲ ಎಂದು ಪಾಟೀಲ್ ಟೀಕಿಸಿದರು.
ಸುಳೆಯವರೇ ನೀವು ಇನ್ನೂ ಏಕೆ ರಾಜಕಾರಣದಲ್ಲಿದ್ದೀರಿ? ನೀವು ಮನೆಗೆ ಹೋಗಿ ಮತ್ತು ಅಡುಗೆ ಮಾಡಿಕೊಂಡಿರಿ. ನೀವು ದೆಹಲಿಗಾದರೂ ಹೋಗಿ ಅಥವಾ ಸ್ಮಶಾನಕ್ಕಾದರೂ ಹೋಗಿ, ನಮಗೆ ಒಬಿಸಿ ಮೀಸಲಾತಿ ಕೊಡಿ ಎಂದು ಒತ್ತಾಯಿಸಿದ ಪಾಟೀಲ್, ಒಬ್ಬ ಸಂಸದೆಯಾಗಿ ಒಬ್ಬ ಮುಖ್ಯಮಂತ್ರಿಯನ್ನು ಯಾವ ರೀತಿಯಲ್ಲಿ ಭೇಟಿ ಮಾಡಲು ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವುದು ಗೊತ್ತಿಲ್ಲ ಎಂದು ಕಿಡಿ ಕಾರಿದರು.
ಇದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಎನ್ ಸಿ ಪಿಯ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಚೌಹಾಣ್ ಅವರು, ಹಾಲಿ ಮಹಿಳಾ ಶಾಸಕರಿಗೆ ಟಿಕೆಟ್ ನಿರಾಕರಣೆ ಮಾಡಿ ಅವರ ಕ್ಷೇತ್ರದಿಂದ ಸ್ಪರ್ಧಿಸಿದ ವ್ಯಕ್ತಿಯು ಅತ್ಯುತ್ತಮ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವವರ ಬಗ್ಗೆ ಕೀಳಾಗಿ ಮಾತಾಡಿರುವುದು ಅವರ ಚಾರಿತ್ರ್ಯವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.