ಗೋ ಫಸ್ಟ್ ಏರ್ ಲೈನ್ಸ್ ನ ಎಲ್ಲಾ ವಿಮಾನಗಳು ಮೇ 3 ಮತ್ತು 4 ರಂದು ರದ್ದುಗೊಳ್ಳಲಿವೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ತಿಳಿಸಿದೆ.
ಮೇ 3 ಮತ್ತು 4 ರಂದು ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗುವುದು ಎಂದು ವಿಮಾನಯಾನ ಸಂಸ್ಥೆಯು ಅವರಿಗೆ ತಿಳಿಸಿದೆ ಎಂದು ವಿಮಾನಯಾನ ನಿಯಂತ್ರಕರು ತಿಳಿಸಿದ್ದಾರೆ. ವಿಮಾನಯಾನ ರದ್ದತಿಯ ನಂತರ ಡಿಜಿಸಿಎ ಗೋ ಫಸ್ಟ್ ಗೆ ಶೋಕಾಸ್ ನೋಟಿಸ್ ನೀಡಿದೆ.
ದೆಹಲಿಯ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್(NCLT) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಳಿಗಾಗಿ ಸಂಸ್ಥೆ ಅರ್ಜಿ ಸಲ್ಲಿಸಿದೆ. ಏರ್‌ಲೈನ್‌ನ ಮುಖ್ಯಸ್ಥ ಕೌಶಿಕ್ ಖೋನಾ, ಪ್ರ್ಯಾಟ್ ಮತ್ತು ವಿಟ್ನಿ(P&W) ಇಂಜಿನ್‌ಗಳನ್ನು ಪೂರೈಸದ ಕಾರಣ ಏರ್‌ಲೈನ್ ತನ್ನ ಫ್ಲೀಟ್‌ನ ಅರ್ಧಕ್ಕಿಂತ ಹೆಚ್ಚು 28 ವಿಮಾನಗಳನ್ನು ರದ್ದು ಮಾಡಿದೆ ಎಂದು ಹೇಳಿದರು.
ವಾಡಿಯಾಸ್ ಒಡೆತನದ ಗೋ ಫಸ್ಟ್, ತೈಲ ಮಾರುಕಟ್ಟೆ ಕಂಪನಿಗಳಿಗೆ(ಒಎಂಸಿ) ಪಾವತಿಸಲು ಹಣದ ಕೊರತೆಯಿಂದಾಗಿ ತನ್ನ ವಿಮಾನಗಳನ್ನು ಸ್ಥಗಿತಗೊಳಿಸಿದೆ. ವಿಮಾನಯಾನ ಸಂಸ್ಥೆಯು ಬೆಳವಣಿಗೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದೆ ಮತ್ತು ವಿಮಾನಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ಗೆ(ಡಿಜಿಸಿಎ) ವಿವರವಾದ ವರದಿಯನ್ನು ಸಲ್ಲಿಸಲಿದೆ ಎನ್ನಲಾಗಿದೆ.
ಮೇ 3 ಮತ್ತು 4 ರಂದು ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು. NCLT ಒಮ್ಮೆ ಅರ್ಜಿಯನ್ನು ಒಪ್ಪಿಕೊಂಡರೆ, ನಂತರ ವಿಮಾನಗಳನ್ನು ಪುನರಾರಂಭಿಸಲಾಗುವುದು ಎಂದು ಖೋನಾ ಹೇಳಿದರು. ಗೋ ಫಸ್ಟ್ 5,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.