ಕೊರೊನಾ, ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವಿಗೆ ಕಾರಣವಾಗಿದೆ. ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರ ಬದುಕು ಬೀದಿಗೆ ಬಿದ್ದಿದೆ. ಕೊರೊನಾ, ಭಾರತದಲ್ಲಿ 1,19,000 ಮಕ್ಕಳು ಸೇರಿದಂತೆ ವಿಶ್ವದಾದ್ಯಂತ 15 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ.
ಈ ಮಕ್ಕಳು ಪೋಷಕರನ್ನು ಇಲ್ಲವೆ ಪಾಲನೆ ಮಾಡ್ತಿದ್ದ ಅಜ್ಜ ಅಥವಾ ಅಜ್ಜಿಯನ್ನು ಕಳೆದುಕೊಂಡಿದ್ದಾರೆ. ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಕೊರೊನಾದ ಮೊದಲ 14 ತಿಂಗಳಲ್ಲಿ ಒಂದು ಅಥವಾ ಎರಡು ಲಕ್ಷಕ್ಕೂ ಹೆಚ್ಚು ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಮಕ್ಕಳು ಅಜ್ಜ-ಅಜ್ಜಿ ಸಾವನ್ನು ನೋಡಿದ್ದಾರೆ.
ಮಾರ್ಚ್ 2021 ರಲ್ಲಿ ಭಾರತದಲ್ಲಿ ಸುಮಾರು 5,091 ಮಕ್ಕಳು ಅನಾಥರಾಗಿದ್ದಾರೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಏಪ್ರಿಲ್ 2021 ರಲ್ಲಿ ಹೊಸದಾಗಿ ಅನಾಥ ಮಕ್ಕಳ ಈ ಸಂಖ್ಯೆ ಸುಮಾರು 43,139 ಕ್ಕೆ ಏರಿದೆ. ಹೊಸದಾಗಿ ಅನಾಥ ಮಕ್ಕಳ ಪ್ರಮಾಣ 8.5 ಪಟ್ಟು ಹೆಚ್ಚಾಗಿದೆ. ಪೋಷಕರು ಅಥವಾ ಪಾಲನೆದಾರರನ್ನು ಕಳೆದುಕೊಂಡಿರುವ ಮಕ್ಕಳು, ಅನಾರೋಗ್ಯ, ದೈಹಿಕ ಕಿರುಕುಳ, ಲೈಂಗಿಕ ಹಿಂಸೆ ಮತ್ತು ಹದಿಹರೆಯದ ಗರ್ಭಧಾರಣೆಯಂತಹ ಅನೇಕ ಸಮಸ್ಯೆ ಎದುರಿಸುವ ಅಪಾಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ, ಪೆರು, ಯುನೈಟೆಡ್ ಸ್ಟೇಟ್ಸ್, ಭಾರತ, ಬ್ರೆಜಿಲ್ ಮತ್ತು ಮೆಕ್ಸಿಕೊದಲ್ಲಿ ಅನಾಥವಾದ ಮಕ್ಕಳ ಸಂಖ್ಯೆ ಹೆಚ್ಚಿದೆ. ಪ್ರತಿಯೊಂದು ದೇಶದಲ್ಲೂ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚಿದ್ದಾರೆ. ಮಧ್ಯ ವಯಸ್ಕರ ಸಂಖ್ಯೆ ಹೆಚ್ಚಾಗಿದ್ದು, ತಾಯಿಗಿಂತ ತಂದೆ ಕಳೆದುಕೊಂಡ ಮಕ್ಕಳ ಸಂಖ್ಯೆ ಐದು ಪಟ್ಟು ಹೆಚ್ಚಿದೆ.