
ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಹಾಕಿದ್ದು ಕಾರ್ಯರೂಪಕ್ಕೆ ಬಂದಿದೆ. EMMVEE ಎನರ್ಜಿ ಕಂಪನಿಯಿಂದ ರೂ. 15 ಸಾವಿರ ಕೋಟಿ ಹೂಡಿಕೆ; 10 ಸಾವಿರ ಉದ್ಯೋಗಗಳ ಸೃಷ್ಟಿಯಾಗಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಗುಣಮಟ್ಟದ ಸೋಲಾರ್ ಫೋಟೋ ವೋಲ್ಟಾಯಿಕ್ ಕೋಶಗಳು ಮತ್ತು ಮಾಡ್ಯೂಲ್ ಉತ್ಪಾದನೆಗೆ ಹೆಸರಾಗಿರುವ, ಬೆಂಗಳೂರು ಮೂಲದ EMMVEE ಎನರ್ಜಿ ಕಂಪನಿಯು ತನ್ನ ಉತ್ಪಾದನಾ ಘಟಕ ಆರಂಭಿಸಲು ಹಂತಹಂತವಾಗಿ 15 ಸಾವಿರ ಕೋಟಿ ರೂಪಾಯಿ ಹೂಡಲು ತೀರ್ಮಾನಿಸಿದೆ. ಈ ಸಂಬಂಧ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಯಿತು.
ಮೊದಲ ಹಂತದಲ್ಲಿ 5,000 ಕೋಟಿ ರೂ.ಹೂಡಿಕೆ ಮಾಡಲಿದ್ದು, 5 ಗಿಗಾವ್ಯಾಟ್ ಸಾಮರ್ಥ್ಯದ ಉತ್ಪಾದನೆ ಮಾಡಲಿದೆ. ಒಟ್ಟು ಯೋಜನೆಯಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಕಂಪನಿಯೊಂದಿಗೆ ಹೂಡಿಕೆ ಸಂಬಂಧ ಇತ್ತೀಚಿಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದು, ಕಾರ್ಯರೂಪಕ್ಕೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.