ಬೆಂಗಳೂರು: 2032ರ ವೇಳೆಗೆ ಕರ್ನಾಟಕ 1 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆಯನ್ನು ಬೆಳೆಸುವ ಹೆಗ್ಗುರಿಯನ್ನು ಸರಕಾರ ಇಟ್ಟುಕೊಂಡಿದ್ದು, ಈ ನಿಟ್ಟಿನಲ್ಲಿ ಉದ್ಯಮ ವಲಯದಲ್ಲಿ ಅಸಾಂಪ್ರದಾಯಿಕ ಕ್ಷೇತ್ರಗಳತ್ತ ಗಮನಹರಿಸಲಾಗುತ್ತಿದೆ. ಇದರಿಂದ ಹೂಡಿಕೆ ಹರಿವಿನ ಜೊತೆಗೆ ಉದ್ಯೋಗಾವಕಾಶ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ನಡೆಯುತ್ತಿರುವ ಗ್ಲೋಬಲ್ ಬಿಝಿನೆಸ್ ಫೋರಂನ (ಜಿಬಿಎಫ್) 54ನೇ ಜಾಗತಿಕ ವ್ಯಾಪಾರ ಸಮಾವೇಶದಲ್ಲಿ ಮಾತನಾಡಿದ ಅವರು,
ಭಾರತದಲ್ಲಿ ಎರಡನೇ ಬಾರಿಗೆ ಹಾಗೂ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸಮಾವೇಶ ಇದಾಗಿದೆ. 30ಕ್ಕೂ ಹೆಚ್ಚು ದೇಶಗಳ ಉನ್ನತ ಮಟ್ಟದ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ರಾಜ್ಯದ ಆರ್ಥಿಕ ಬೆಳವಣಿಗೆಯ ದರವು ಸದ್ಯಕ್ಕೆ ಶೇ.18ರಷ್ಟಿದ್ದು, ಜಿಡಿಪಿಯಲ್ಲಿ ಕರ್ನಾಟಕವು ಇಡೀ ದೇಶದಲ್ಲಿ ಮೂರನೆಯ ಸ್ಥಾನದಲ್ಲಿದೆ. ತಲಾವಾರು ಆದಾಯವು ಕಳೆದ 5 ವರ್ಷಗಳಲ್ಲಿ ಶೇ.62ರಷ್ಟು ಹೆಚ್ಚಳ ಕಂಡಿದೆ ಎಂದರು.
ಸರಕಾರಿ ಮತ್ತು ಖಾಸಗಿ ವಲಯದ ಉತ್ಪಾದಕರಿಗೆ ಸರಕಾರದ ವತಿಯಿಂದ ಭೂಮಿ ಮತ್ತು ಇನ್ನಿತರ ಮೂಲಸೌಲಭ್ಯಗಳನ್ನು ಸುಗಮವಾಗಿ ಒದಗಿಸಲಾಗುವುದು. ಬೆಂಗಳೂರನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಕೈಗಾರಿಕಾ ಕ್ರಾಂತಿ 4.0ಯನ್ನು ನನಸುಗೊಳಿಸಲು ಸಾವಿರಾರು ಎಕರೆ ಪ್ರದೇಶಗಳಲ್ಲಿ ಕೈಗಾರಿಕಾ ಪಾರ್ಕುಗಳನ್ನು ಸರಕಾರವು ಅಭಿವೃದ್ಧಿ ಪಡಿಸುತ್ತಿದೆ ಎಂದು ತಿಳಿಸಿದರು.