ಬೆಂಗಳೂರು: ರಾಜ್ಯವನ್ನು ಜಾಗತಿಕ ಜೈವಿಕ ತಂತ್ರಜ್ಞಾನ ಉತ್ಪಾದನಾ ಕೇಂದ್ರವನ್ನಾಗಿಸುವ ಗುರಿ ಹೊಂದಲಾಗಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ 2024 -29 ನೇ ಸಾಲಿನ ಜೈವಿಕ ತಂತ್ರಜ್ಞಾನ ನೀತಿಯನ್ನು ಪ್ರಕಟಿಸಿದೆ.
ಇದರೊಂದಿಗೆ 2029ರ ವೇಳೆಗೆ ಜೈವಿಕ ತಂತ್ರಜ್ಞಾನ(ಬಿ.ಟಿ.) ಕ್ಷೇತ್ರದಲ್ಲಿ 30,000 ಉದ್ಯೋಗ ಸೃಷ್ಟಿ, 20,000 ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ. ರಾಜ್ಯದ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ನವೋದ್ಯಮ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪ್ರವೇಶಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡಿರುವ ಬಿ.ಟಿ. ನೀತಿ 2024- 29 ಸಿದ್ಧಪಡಿಸಲಾಗಿದೆ.
50 ನವೀನ ಸಂಸ್ಥೆಗಳು ಸೇರಿ 300 ಜೈವಿಕ ತಂತ್ರಜ್ಞಾನ ಕಂಪನಿಗಳನ್ನು ರಚಿಸುವಂತೆ ಮಾಡುವುದು, 30,000 ಉದ್ಯೋಗ ಸೃಷ್ಟಿಸಿ, 20,000 ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡಲು 200ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದುವ ಗುರಿಯನ್ನು ಈ ನೀತಿ ಹೊಂದಿದೆ.
ಈ ನೀತಿ ಅಡಿಯಲ್ಲಿ ನವೋದ್ಯಮಗಳಿಗೆ ರಾಜ್ಯ ಜಿಎಸ್ಟಿ, ಮಾರುಕಟ್ಟೆ ವೆಚ್ಚ, ಪೇಟೆಂಟ್ ವೆಚ್ಚ, ಗುಣಮಟ್ಟ ಪ್ರಮಾಣಿಕರಣ ವೆಚ್ಚ ಮರುಪಾವತಿ ನೀಡುವುದಾಗಿ ಘೋಷಿಸಲಾಗಿದೆ.
ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ, ದೊಡ್ಡ ಕೈಗಾರಿಕೆಗಳಿಗೆ ಮಾರುಕಟ್ಟೆ ವೆಚ್ಚ, ಗುಣಮಟ್ಟ ಪ್ರಮಾಣೀಕರಣ ವೆಚ್ಚ, ಬಡ್ಡಿ ಸಬ್ಸಿಡಿ, ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ, ಭೂ ಪರಿವರ್ತನೆ ಶುಲ್ಕ, ವಿದ್ಯುತ್ ದರ ರಿಯಾಯಿತಿ ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ. ಹೂಡಿಕೆಯನ್ನು ಆಕರ್ಷಿಸಲು ಜೈವಿಕ ತಂತ್ರಜ್ಞಾನ ನಿಯಮಗಳನ್ನು ಸರಳಗೊಳಿಸಲಾಗಿದೆ.