ಹಾಸನ: ಗ್ಯಾರಂಟಿ ಯೋಜನೆ ಜಾರಿಯಿಂದ ರಾಜ್ಯ ದಿವಾಳಿಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ರಾಜ್ಯ ಇನ್ನೂ ದಿವಾಳಿಯಾಗಿಲ್ಲ, ಬೇಕಿದ್ದರೆ ಇನ್ನಷ್ಟು ಗ್ಯಾರಂಟಿ ಕೊಡಲಿ ಎಂದು ಹೇಳಿದ್ದಾರೆ. ಹಾಸನ ತಾಲೂಕಿನ ಮಾರನಾಯಕನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್, ಬಿಜೆಪಿಯವರಿಗೆ ಬಜೆಟ್ ಬಗ್ಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ದಿನ ಸುಳ್ಳು ಹೇಳಿ ಅದನ್ನೇ ಸತ್ಯವೆಂದು ಬಿಂಬಿಸುತ್ತಿದ್ದಾರೆ. ಇನ್ನು ರಾಜ್ಯ ದಿವಾಳಿಯಾಗಿಲ್ಲ, ಇನ್ನೂ ಐದು ಗ್ಯಾರಂಟಿ ಕೊಡಲಿ ಎಂದಿದ್ದಾರೆ.
ನಾನು ಮುಖ್ಯಮಂತ್ರಿ ಆಗಿದ್ದಾಗ ಸುಮಾರು 45,000 ಕೋಟಿ ರೂಪಾಯಿ ಸಾಲ ಇದ್ದು, ಅದೀಗ 6.65 ಲಕ್ಷ ಕೋಟಿ ರೂಪಾಯಿಯಾಗಿದೆ. ಗ್ಯಾರಂಟಿಗಳಿಗೆ 1.05 ಲಕ್ಷ ರೂ. ಸಾಲ ಮಾಡಿದ್ದೀರಿ. ಈ ಸಾಲ ತೀರಿಸುವರು ಯಾರು? 1 ಲಕ್ಷ ಕೋಟಿ ರೂ. ಸಾಲ ಮಾಡಿ 52 ಸಾವಿರ ಕೋಟಿ ರೂ. ಗ್ಯಾರಂಟಿಗೆ ನೀಡುತ್ತಿದ್ದೀರಿ. ಬಡವರ ಮೇಲೆ ಸಾಲದ ಹೊರೆಯಾಗುತ್ತಿದೆ. ಇದಕ್ಕೆ ಬಡವರ ಬಜೆಟ್ ಎಂದು ಹೇಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.