ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ನೋಡಿದರೆ ಮಕ್ಕಳು, ಮಹಿಳೆಯರು ಹೊರಗೆ ಓಡಾಡಲು ಭಯಪಡುವ ಸ್ಥಿತಿ ಎದುರಾಗಿದೆ. ಅದರಲ್ಲಿಯೂ ಕೋಲ್ಕತ್ತಾದಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಬಳಿಕ ಹೆಣ್ಣುಮಕ್ಕಳು ಸಂಜೆಯೊಳಗೆ ಮನೆ ಸೇರಿಕೊಳ್ಳಬೇಕು ಎಂಬ ಚರ್ಚೆಗಳೂ ನಡೆಯುತ್ತಿವೆ.
ಯಾರು ಏನೇ ತಪ್ಪು ಮಾಡಿದರೂ ಹೆಣ್ಣು ಮಕ್ಕಳದ್ದೇ ತಪ್ಪು ಎಂಬ ಮನಸ್ಥಿತಿಯಲ್ಲಿಯೇ ವಾದ ಮಾಡುವವರು ಸಮಾಜದಲ್ಲಿದ್ದಾರೆ. ಯಾವಾಗಲೂ ಹೆಣ್ಣು ಮಕ್ಕಳೇ ಶಿಕ್ಷೆಗೆ ಗುರಿಯಾಗಬೇಕೆ? ಇಂತಹ ಸಂದಿಗ್ಧ ಸಂದರ್ಭದಲ್ಲಿ ‘ವಿಕೀಪಿಡಿಯಾ ಟೀಂ’ ಮಾಡಿರುವ ವಿಡಿಯೋ ಸಮಾಜಕ್ಕೆ ಹೊಸ ಸಂದೇಶವನ್ನು ರವಾನಿಸಿದೆ.
ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚಲ್ಲುವ ವಿಕಿಪೀಡಿಯಾ ತಂಡದ ವಿಕಾಸ್ ಹಾಗೂ ಅಮಿತ್ ಚಿಟ್ಟೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಹೆಣ್ಣುಮಕ್ಕಳು ಸೇಫ್ ಆಗಿರಬೇಕು ಎಂದರೆ ಸಂಜೆ 6-7 ಗಂಟೆಯೊಳಗೆ ಮನೆಗೆ ಬರಬೇಕು. ಅದೊಂದೇ ಪರಿಹಾರ ಎಂಬ ಚರ್ಚೆ ಕೇಳಿದ ತಾಯಿ, ಮಗನನ್ನು ತಕ್ಷಣ ಮನೆಗೆ ಕರೆಸುವಂತೆ ತಂದೆಗೆ ಹೇಳುತ್ತಾಳೆ. ಮನೆಗೆ ಬಂದ ಮಗ ಅರ್ಜಂಟಾಗಿ ಬರಲು ಹೇಳಿದ್ದೇಕೆ ಎಂದು ತಾಯಿ ಬಳಿ ಕೇಳಿದ್ದಕ್ಕೆ ಹೆಣ್ಣು ಮಕ್ಕಳು ಬೇಗನೇ ಮನೆಗೆ ಬರುವ ಬದಲು ನಿಮ್ಮಂತ ಗಂಡು ಮಕ್ಕಳು 6-7 ಗಂಟೆ ಒಳಗೆ ಮನೆಗೆ ಬಂದ್ರೆ ಆಚೆಕಡೆ ಹೆಣ್ಣು ಮಕ್ಕಳು ಸೇಫ್ ಆಗಿ ಇರಬಹುದು…ಎಂಬರ್ಥದಲ್ಲಿ ಹೇಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.