ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದಕ್ಕಿಂತ ಹೆಚ್ಚಿನ ನೋವು ಬೇರೆ ಯಾವುದೂ ಇಲ್ಲ. ಯಾರೂ ಕೂಡ ಆ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಆದರೆ ನಾವು ಯಾವಾಗಲೂ ಒಬ್ಬ ವ್ಯಕ್ತಿಗೆ ನೋವನ್ನು ನಿಭಾಯಿಸಲು ಸಹಾಯ ಮಾಡಬಹುದು. ಹಾಗೆಯೇ ಇಲ್ಲೊಬ್ಬಾಕೆ ತನ್ನ ಗೆಳೆಯನ ಜನ್ಮದಿನದಂದು ವಿಶೇಷವಾದದ್ದನ್ನೇ ಮಾಡಿದ್ದಾಳೆ.
ಜಯರ್ ಹಿಂದ್ಸ್ ಎಂಬಾತ ಇತ್ತೀಚೆಗೆ ತನ್ನ ನಾಯಿಯನ್ನು ಕಳೆದುಕೊಂಡಿದ್ದಾನೆ. ಹೀಗಾಗಿ ಅವನಿಗೆ ಗೆಳತಿ ಅದ್ಭುತವಾದ ಉಡುಗೊರೆ ನೀಡಲು ಬಯಸಿದ್ದಳು. ಆ ಉಡುಗೊರೆಯು ಅವನ ಸಾಕುಪ್ರಾಣಿಯೊಂದಿಗೆ ಸಂಬಂಧವನ್ನು ಹೊಂದಿತ್ತು. ಉಡುಗೊರೆ ನೋಡಿದಾಕ್ಷಣ ಆತ ಅಳುವುದಕ್ಕೆ ಶುರುಮಾಡಿದ್ದಾನೆ.
ಜುಲೈ 27 ರಂದು ಮಜಿಕಲ್ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಜಯರ್ ತನ್ನ ಹುಟ್ಟುಹಬ್ಬದ ಉಡುಗೊರೆಯನ್ನು ತೆರೆಯುವುದನ್ನು ಮತ್ತು ಅವನ ಗೆಳತಿ ಲಾನಿ ಅವನ ಎದುರು ಕುಳಿತು ಅವನ ಪ್ರತಿಕ್ರಿಯೆಯನ್ನು ದಾಖಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ತನ್ನ ನಾಯಿಯ 3ಡಿ ಹೊಲೊಗ್ರಾಫಿಕ್ ಚಿತ್ರದೊಂದಿಗೆ ಸ್ಫಟಿಕದ ಶೋಪೀಸ್ ಅನ್ನು ನೋಡಿದ ತಕ್ಷಣ ಆತನ ಕಣ್ಣಿನಿಂದ ನೀರು ಹರಿಯಲಾರಂಭಿಸಿದೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲೂ ಕಣ್ಣೀರು ಹಾಕಿಸಿದೆ.