ಆಗ್ರಾ: ಚಲಿಸುತ್ತಿದ್ದ ಎಕ್ಸ್ ಪ್ರೆಸ್ ರೈಲಿನ ಕಮೋಡ್ ನಲ್ಲಿ ಬಾಲಕಿ ಕಾಲು ಸಿಲುಕಿಕೊಂಡು ಒಂದು ಗಂಟೆ ಕಾಲ ಬಾಲಕಿ ಒದ್ದಾಡಿದ ಘಟನೆ ಅವಧ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.
ಆಗ್ರಾದ ತಾಜ್ ನಗರದಲ್ಲಿ ಈ ಘಟನೆ ನಡೆದಿದ್ದು, ನಾಲ್ಕು ವರ್ಷದ ಬಾಲಕಿ ರೈಲಿನ ಶೌಚಾಲಯಕ್ಕೆ ತೆರಳಿದ್ದಾಗ ಬಾಲಕಿ ಕಾಲು ಕಮೋಡ್ ನಲ್ಲಿ ಸಿಲುಕಿಕೊಂಡಿದೆ. ಬಾಲಕಿ ಕಿರುಚುತ್ತಿದ್ದಂತೆ ಆಕೆಯ ತಾಯಿಗೆ ಗೊತ್ತಾಗಿದೆ.
ಆಗ್ರಾ ನಿಲ್ದಾಣದಿಂದ ರೈಲು ಹೊರಟು ಈದ್ಗಾ ನಿಲ್ದಾಣದ ಬಳಿ ಬರುತ್ತಿದ್ದಂತೆ ಬಾಲಕಿ ಶೌಚಾಲಯಕ್ಕೆ ಹೋಗುವುದಾಗಿ ತಿಳಿಸಿದ್ದಳು. ಆಕೆಯ ತಾಯಿ ಮಗಳನ್ನು ಶೌಚಾಲಯಕ್ಕೆ ಕರೆದೊಯ್ದು ಕಮೋಡ್ ಮೇಲೆ ಕೂರಿಸಿದ್ದರು. ಫೋನ್ ಬಂತೆಂದು ಬಾಲಕಿ ತಾಯಿ ಮೊಬೈಲ್ ನಲ್ಲಿ ಮಾತನಾಡಲು ಶುರುಮಾಡಿದ್ದಾರೆ. ಈ ವೇಳೆ ರೈಲು ಚಲಿಸಲು ಪ್ರಾರಂಭವಾದ್ದರಿಂದ ರೈಲು ಅಲುಗಾಡಿದೆ. ಈ ವೇಳೆ ಬಾಲಕಿ ಕಾಲು ರೈಲಿನ ಕಮೋಡ್ ನಲ್ಲಿ ಸಿಲುಕಿದೆ. ಬಾಲಕಿ ಕಿರುಚಿದ್ದಾಳೆ. ತಕ್ಷಣ ಬಂದ ತಾಯಿ ಆಕೆಯ ಕಾಲನ್ನು ಹೊರತೆಗೆಯಲು ಯತ್ನಿಸಿದ್ದಾರೆ ಆದರೆ ಸಾಧ್ಯವಾಗಿಲ್ಲ. ಈ ವೇಳೆ ಇತರ ಪ್ರಯಾಣಿಕರೂ ಸಹಾಯಕ್ಕೆ ಬಂದು ಬಾಲಕಿಯ ಕಾಲನ್ನು ಹೊರತೆಗೆಯಲು ಎಳೆದಿದ್ದಾರೆ ಆದರೂ ಆಗಿಲ್ಲ. ಬಳಿಕ ಪ್ರಯಾಣಿಕರು ರೈಲ್ವೆ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ರೈಲು 20 ಕಿ.ಮೀ ಚಲಿಸಿ ಫತೇಪುರ್ ಸಿಕ್ರಿ ನಿಲ್ದಾಣದಲ್ಲಿ ನಿಂತಿದೆ.
ಸ್ಥಳಕ್ಕೆ ಆಗಮಿಸಿದ ರೈಲ್ವೆ ತಾಂತ್ರಿಕ ತಂಡ ರೈಲಿನ ಬಯೋ ಟಾಯ್ಲೆಟ್ ಬಾಕ್ಸ್ ತೆರೆದು ಬಾಲಕಿಯ ಕಾಲನ್ನು ಹೊರತೆಗೆದಿದ್ದಾರೆ. ಬಾಲಕಿ ಕಾಲಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಬಾಲಕಿಗಾಗಿ ಫತೇಪುರ ಸಿಕ್ರಿ ನಿಲ್ದಾಣದಲ್ಲಿ ರೈಲು ಒಂದು ಗಂಟೆಗಳ ಕಾಲ ನಿಂತಿತ್ತು ಎಂದು ತಿಳಿದುಬಂದಿದೆ.