ಬಾಗಲಕೋಟೆ: ಟ್ಯೂಷನ್ ಗೆ ಹೋಗಿದ್ದ 7 ವರ್ಷದ ಬಾಲಕಿಯನ್ನು ಅಪಹರಣ ಮಾಡಲಾಗಿದ್ದು, 50 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಡಲಾಗಿದೆ.
7 ವರ್ಷದ ಕೃತಿಕಾಳನ್ನು ರಾತ್ರಿ 8 ಗಂಟೆಗೆ ಅಪಹರಣ ಮಾಡಲಾಗಿದೆ. ತಿಪ್ಪಣ್ಣ ಕೊಡಗಾನೂರು ಮತ್ತು ಸುನೀತಾ ದಂಪತಿಯ ಪುತ್ರಿಯಾಗಿರುವ ಕೃತಿಕಾಳನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಬಾಗಲಕೋಟೆಯ ನವನಗರದ 61ನೇ ಸೆಲ್ಟರ್ ನಲ್ಲಿ ಘಟನೆ ನಡೆದಿದ್ದು, ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೃತಿಕಾಳನ್ನು ಮಾವ ಅನಿಲ್ ಬಾಡಗಂಡಿ ಹಾಗೂ ಬಿಹಾರದ ನಾಲ್ವರು ಸಹಚರರು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಾಕೊಲೇಟ್ ಕೊಟ್ಟು ಬಾಲಕಿಯನ್ನು ಮಾವನೇ ಕಾರ್ ನಲ್ಲಿ ಕಿಡ್ನಾಪ್ ಮಾಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಆಕೆಯ ಮಾವ ಜೂಜಿನಿಂದ ಹಣ ಕಳೆದುಕೊಂಡಿದ್ದ. ಆತನೇ ಅಪಹರಣ ಮಾಡಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಅಪಹರಣಕಾರರು ಬಾಲಕಿ ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಪೊಲೀಸರು ಅಪಹರಣಕಾರರ ಬಂಧನಕ್ಕೆ ಬಲೆ ಬೀಸಿದ್ದಾರೆ.