ಮೈಸೂರು: ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರಿದೆ. ಟೊಮೆಟೊ ಬೆಲೆಗೆ ಬಂಗಾರದ ರೇಟ್ ಬಂದ ಬೆನ್ನಲ್ಲೇ ಟೊಮೆಟೊ ತೋಟಕ್ಕೆ ಸಿಸಿಟಿವಿ ಕಣ್ಗಾವಲು, ಪೊಲೀಸ್ ಸಿಬ್ಬಂದಿಗಳಿಂದ ಭದ್ರತೆಯೊದಗಿಸಿದ್ದಾಯಿತು. ಈಗ ಶುಂಠಿ ಸರದಿ ಆರಂಭವಾಗಿದೆ. ಶುಂಠಿ ಬೆಲೆಯಲ್ಲೂ ಒಂದೇ ಸಮನೇ ಏರಿಕೆಯಾಗುತ್ತಿದೆ.
ಟೊಮೆಟೊ ಬೆಲೆ ಹೆಚ್ಚಳವಾಗುತ್ತಿದ್ದಂತೆ ಮಾರ್ಕೆಟಿಗೆ ಸಾಗಿಸುತ್ತಿದ್ದ ಟೊಮೆಟೊ ವಾಹನಗಳನ್ನೇ ಕಳ್ಳತನ ಮಾಡಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದೀಗ ಕಟಾವು ಮಾಡಿಟ್ಟಿದ್ದ ಶುಂಠಿಯನ್ನೇ ಕಳ್ಳರು ಕದ್ದೊಯ್ದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ.
ಶುಂಠಿ ದರವೂ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಂಠಿ ಕಳ್ಳರು ಕೈಚಳಕ ತೋರುತ್ತಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಟಿಬೆಟಿಯನ್ ಕಾಲೋನಿಯ ಲಾಖಫಾ ಸೇರಿಂಗ್ ಎಂಬುವವರು ತಮ್ಮ ಜಮೀನಿನಲ್ಲಿ ಅಪಾರ ಪ್ರಮಾಣದಲ್ಲಿ ಶುಂಠಿ ಬೆಳೆದಿದ್ದು, ಶುಂಠಿ ಕಟಾವು ಆರಂಭಿಸಿದ್ದಾರೆ. ಈ ನಡುವೆ ತಡರಾತ್ರಿ ಶುಂಠಿ ತೋಟಕ್ಕೆ ನುಗ್ಗಿದ ಕಳ್ಳರು 8 ಮೂಟೆ ಶುಂಠಿಯನ್ನು ಕದ್ದೊಯ್ದಿದ್ದಾರೆ.
ಕಟಾವು ಮಾಡಿ ಮೂಟೆಯಲ್ಲಿ ಶುಂಠಿ ತುಂಬಿಟ್ಟಿದ್ದ ರೈತ, ಮಾರುಕಟ್ಟೆಗೆ ಸಾಗಿಸಲು ಮುಂದಾಗಿದ್ದರು. ಅಷ್ಟರಲ್ಲಿ 8 ಮೂಟೆ ಶುಂಠಿ ಮಾಯವಾಗಿದೆ. ಶುಂಠಿ ಕಳೆದುಕೊಂಡಿರುವ ರೈತ ಕಂಗಾಲಾಗಿದ್ದು, ಪಿರಿಯಾಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.