ಡ್ರ್ಯಾಗನ್ ಅಂದಾಕ್ಷಣ, ಮೊಟ್ಟ ಮೊದಲು ನೆನಪಾಗೋದು ಹಾವಿನ ಆಕಾರದ ಬೆಂಕಿ ಉಗುಳುವ ವಿಚಿತ್ರ ಜೀವಿ. ಇಂತಹ ಭಯಂಕರ ಜೀವಿಯನ್ನ ನೀವು ಹಾಲಿವುಡ್ ಸಿನೆಮಾಗಳಲ್ಲಿಯೇ ನೋಡಿರಲಿಕ್ಕೆ ಸಾಧ್ಯ. ಅಸಲಿಗೆ ಈ ಭಯಾನಕ ಜೀವಿ ಕಾಲ್ಪನಿಕವಾಗಿರೋದು ಅಷ್ಟೇ.
ಇಂತಹದ್ದೊಂದು ಕಾಲ್ಪನಿಕ ಜೀವಿ ಚೀನಾದ ಜಾನಪದ ಕಥೆಗಳಲ್ಲಿ ನೋಡಬಹುದು. ಆದರೆ ಇತ್ತೀಚೆಗೆ ಇದೇ ವಿಚಿತ್ರ ಅಷ್ಟೇ ಭಯಂಕರ ಜೀವಿಯನ್ನ ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿರುವುದನ್ನ ತೋರಲಾಗಿದೆ. ಅದು ಕೂಡ ಕತ್ತಲಿನ ಸಮಯದಲ್ಲಿ. ಅದನ್ನ ಈಗ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಲಾಗಿದ್ದು, ಆ ವಿಡಿಯೋ ಈಗ ವೈರಲ್ ಆಗಿದೆ.
ದೈತ್ಯ ಡ್ರ್ಯಾಗನ್ ಗಾಳಿಯಲ್ಲಿ ಹಾರುತ್ತಿರುವುದನ್ನ ಇಲ್ಲಿ ನೀವು ಗಮನಿಸಬಹುದು. ಆಗಾಗ ತನ್ನ ಬಾಯಿ ದೊಡ್ಡದಾಗಿ ತೆರೆಯುತ್ತಿರುವುದನ್ನ ಸಹ ಇಲ್ಲಿ ನೀವು ನೋಡಬಹುದು. ಈ ವಿಡಿಯೋ ನೋಡಿ ಬೆಚ್ಚಿಬಿದ್ದವರೇ ಹೆಚ್ಚು ಜನ. ವಾಸ್ತವವಾಗಿ ಅದು ನಿಜವಾದ ಡ್ರ್ಯಾಗನ್ ಅಲ್ಲವೇ ಅಲ್ಲ. ಅದು ಸಾವಿರ ಡ್ರೋನ್ಗಳ ಸಹಾಯದಿಂದ ತಯಾರಿಸಲಾಗಿರುವ ಡ್ರ್ಯಾಗನ್.
ಇದೊಂದು ಡ್ರೋನ್ ಶೋ ದೃಶ್ಯವಾಗಿದ್ದು, ಈ ದೃಶ್ಯ ನೋಡಿ ಶಾಕ್ ಆದವರೇ ಹೆಚ್ಚು ಜನ. ಸಾವಿರಕ್ಕೂ ಹೆಚ್ಚು ಡ್ರೋನ್ಗಳನ್ನ ಬಳಸಿಕೊಂಡು ಇಲ್ಲಿ ಈ ರೀತಿಯಾಗಿ ಡ್ರ್ಯಾಗನ್ ಆಕಾರವನ್ನ ನೀಡಲಾಗಿದೆ.
ಈ ಅದ್ಭುತ ವಿಡಿಯೋವನ್ನು @TansuYegen ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಮತ್ತು 1000 ಡ್ರೋನ್ನಿಂದ ಸೃಷ್ಟಿಯಾದ ಡ್ರ್ಯಾಗನ್ ಅನ್ನುವ ಟೈಟಲ್ ಕೊಡಲಾಗಿದೆ. ಕೇವಲ 5 ಸೆಕೆಂಡ್ಗಳ ಈ ವಿಡಿಯೋವನ್ನು ಇದುವರೆಗೂ 15 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಇನ್ನೂ 19 ಸಾವಿರಕ್ಕೂ ಹೆಚ್ಚು ಜನರು ಇದನ್ನ ಲೈಕ್ ಮಾಡಿದ್ದಾರೆ.