ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಸಮೀಕ್ಷೆಗಳು ಆಘಾತ ತಂದಿವೆ.
ಟಿಆರ್ಎಸ್ ಭಾರಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ಘಟಾನುಘಟಿ ನಾಯಕರು ಪ್ರಚಾರ ಕೈಗೊಂಡಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಸ್ಮೃತಿ ಇರಾನಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ ಹಲವಾರು ಉನ್ನತ ನಾಯಕರು ಹೈದರಾಬಾದ್ ನಲ್ಲಿ ಪ್ರಚಾರ ನಡೆಸಿದ್ದರು.
ಟಿಆರ್ಎಸ್ ಕಾರ್ಯಕಾರಿ ಅಧ್ಯಕ್ಷ ಮತ್ತು ರಾಜ್ಯ ಪುರಸಭೆ ಆಡಳಿತ ಸಚಿವ ಕೆ.ಟಿ.ರಾಮರಾವ್ ಅವರು ಆಡಳಿತ ಪಕ್ಷದ ಅಭಿಯಾನದ ನೇತೃತ್ವ ವಹಿಸಿದ್ದರೆ, ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಿ ಪ್ರಚಾರ ನಡೆಸಿದ್ದರು. ಸಂಸದ ಒವೈಸಿ ಮತ್ತು ಅವರ ಶಾಸಕ ಸಹೋದರ ಅಕ್ಬರುದ್ದೀನ್ ಎಐಎಂಐಎಂ ಪರ ಪ್ರಚಾರ ನಡೆಸಿದ್ದರು.
ಟಿಆರ್ಎಸ್, ಬಿಜೆಪಿ, ಎಐಎಂಐಎಂ ಸೇರಿದಂತೆ ಪ್ರಮುಖ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ನಡೆಸಿದ ಹೊರತಾಗಿಯೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 74.4 ಲಕ್ಷ ಮತದಾರರಲ್ಲಿ ಕೇವಲ 46.5 ರಷ್ಟು ಮತದಾನವಾಗಿದೆ.
ಒಟ್ಟು 150 ವಾರ್ಡ್ ಗಳಲ್ಲಿ 99 ಸ್ಥಾನ ಗಳಿಸಿದ್ದ ಟಿ.ಆರ್.ಎಸ್. 2016 ರಲ್ಲಿ ಅಧಿಕಾಕ್ಕೆ ಬಂದಿತ್ತು. ಬಿಜೆಪಿ ಕೇವಲ 4 ವಾರ್ಡ್ ಗಳಲ್ಲಿ ಜಯಗಳಿಸಿದರೆ, ಎಐಎಂಐಎಂ 44 ವಾರ್ಡ್ ಗಳಲ್ಲಿ ಜಯಗಳಿಸಿತ್ತು. ಈಗ ಚಿತ್ರಣ ಬದಲಾಗುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಪಾಲಿಕೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ ಪಕ್ಷದ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರೂ ಅಧಿಕಾರಕ್ಕೇರುವ ಸಾಧ್ಯತೆ ಇಲ್ಲವೆನ್ನಲಾಗಿದೆ. ಮತದಾನೋತ್ತರ ಸಮೀಕ್ಷೆಗಳಲ್ಲಿ ಟಿಆರ್ಎಸ್ ಹೆಚ್ಚು ಸ್ಥಾನಗಳಲ್ಲಿ ಗೆ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಯಾರಿಗೆ ಅಧಿಕಾರ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.