ಸಾಮಾನ್ಯವಾಗಿ ಎಲ್ಲರಿಗೂ ತುಪ್ಪ ಅಚ್ಚುಮೆಚ್ಚು. ತುಪ್ಪದ ಬಳಕೆಯಿಂದ ಸಿಹಿ ತಿಂಡಿಗಳ ರುಚಿಯು ಹೆಚ್ಚುತ್ತದೆ. ಜೊತೆಗೆ ತುಪ್ಪವು ದೇಹದ ಅನೇಕ ತೊಂದರೆಗಳಿಗೆ ಔಷಧವೂ ಹೌದು. ತುಪ್ಪದ ಕೆಲವು ಔಷಧೀಯ ಗುಣಗಳು ಇಲ್ಲಿವೆ.
ಮಂಡಿನೋವು, ಬೆನ್ನು ಹಾಗೂ ಸೊಂಟ ನೋವಿನ ಸಮಸ್ಯೆ ಇರುವವರು ಪ್ರತಿನಿತ್ಯ ತುಪ್ಪದ ಬಳಕೆ ಮಾಡಿದರೆ ನೋವು ಕಡಿಮೆಯಾಗುತ್ತದೆ. ನೋವಿರುವ ಜಾಗಕ್ಕೆ ತುಪ್ಪ ಹಚ್ಚಿ ನಿಧಾನವಾಗಿ ಉಜ್ಜಿಕೊಂಡು, ಎರಡು ತಾಸಿನ ನಂತರ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ನೋವು ಕ್ರಮೇಣ ವಾಸಿಯಾಗುತ್ತದೆ.
ಅರೆ ತಲೆನೋವು ಹಾಗೂ ಉಷ್ಣದಿಂದ ತಲೆನೋವು ಬರುತ್ತಿದ್ದರೆ ತುಪ್ಪವನ್ನು ಬಿಸಿಮಾಡಿ, ಹತ್ತಿಯಲ್ಲಿ ನೆನೆಸಿ, ಆ ಹತ್ತಿಯನ್ನು ನೆತ್ತಿಯ ಮೇಲೆ ಇಟ್ಟುಕೊಳ್ಳಬೇಕು. ಎರಡರಿಂದ ಮೂರು ತಾಸಿನ ನಂತರ ಬೆಚ್ಚನೆಯ ನೀರಿನಲ್ಲಿ ತಲೆ ಸ್ನಾನ ಮಾಡಬೇಕು. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತದೆ.
ಹಿಮ್ಮಡಿ ಒಡಕಿನ (ಬಿರುಕಿನ) ಸಮಸ್ಯೆ ಇರುವವರು ಒಡೆದ ಜಾಗಕ್ಕೆ ಸ್ವಲ್ಪ ತುಪ್ಪ ಸವರಿಕೊಳ್ಳಬೇಕು. ಒಂದೆರಡು ತಾಸುಗಳ ನಂತರ ಬಿಸಿ ನೀರಿನಲ್ಲಿ ಕಾಲು ತೊಳೆದುಕೊಳ್ಳಬೇಕು. ಪ್ರತಿನಿತ್ಯ ಇದನ್ನು ಮಾಡಿದರೆ, ಹಿಮ್ಮಡಿ ಒಡೆತ ಹಾಗೂ ನೋವು ಕಡಿಮೆಯಾಗುತ್ತದೆ.
ಬಾಯಿ ಹುಣ್ಣಿನ ತೊಂದರೆ ಇರುವವರು, ಒಂದು ಲೋಟ ಹಸಿ ಹಾಲಿಗೆ ಎರಡು ಚಮಚ ತುಪ್ಪ, ಸಕ್ಕರೆ ಹಾಗೂ ಚಿಟಿಕೆ ಅರಿಶಿಣ ಹಾಕಿ ಕುಡಿದರೆ, ಬಾಯಿ ಹುಣ್ಣು ಕಡಿಮೆಯಾಗುತ್ತದೆ.
ತುಪ್ಪವನ್ನು ಸ್ವಲ್ಪ ಬಿಸಿಮಾಡಿ, ಮುಖಕ್ಕೆ ಹಚ್ಚಿ ಮಸಾಜ್ ಮಾಡಿಕೊಂಡು ಒಂದೆರಡು ತಾಸುಗಳ ನಂತರ ಕಡಲೆ ಹಿಟ್ಟಿನಿಂದ ಮುಖ ತೊಳೆದುಕೊಂಡರೆ ಮುಖದ ಕಾಂತಿ ಹೆಚ್ಚುತ್ತದೆ.