ಉತ್ತರಪ್ರದೇಶದಲ್ಲಿ ದುಷ್ಕರ್ಮಿಗಳು ಮೊಬೈಲ್ ಕಿತ್ತುಕೊಳ್ಳುವ ಪ್ರಯತ್ನದಲ್ಲಿ ಬಿ.ಟೆಕ್ ವಿದ್ಯಾರ್ಥಿನಿ ಆಟೋದಿಂದ ಬಿದ್ದು ಸಾವನ್ನಪ್ಪಿರುವ ದುರಂತ ಘಟನೆ ವರದಿಯಾಗಿದೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ದೆಹಲಿ- ಲಖ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಥಮ ವರ್ಷದ ಬಿಟೆಕ್ ವಿದ್ಯಾರ್ಥಿನಿಯೊಬ್ಬಳ ಮೊಬೈಲ್ ದೋಚಿರುವ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿದ್ಯಾರ್ಥಿನಿ ಆಟೋದೊಳಗೆ ಕುಳಿತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಟೋವನ್ನ ಹಿಂಬಾಲಿಸಿದ್ದಾರೆ. ಆಟೋ ಸಮೀಪಕ್ಕೆ ಬಂದು ವಿದ್ಯಾರ್ಥಿನಿಯ ಕೈಯಲ್ಲಿದ್ದ ಮೊಬೈಲ್ ಕಸಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಇದನ್ನು ವಿರೋಧಿಸಿ ಮೊಬೈಲ್ ಕಸಿಯದಂತೆ ದುಷ್ಕರ್ಮಿಗಳ ವಿರುದ್ಧ ಚಲಿಸುತ್ತಿದ್ದ ಆಟೋದಲ್ಲೇ ಹೋರಾಟ ನಡೆಸಿದ್ದಾಳೆ. ಆದರೆ ಎರಡೂ ವಾಹನಗಳು ಸಾಕಷ್ಟು ವೇಗದಲ್ಲಿ ಚಲಿಸುತ್ತಿದ್ದರೂ ಕಿಡಿಗೇಡಿಗಳು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಈ ವೇಳೆ ಯುವತಿ ಹೆದ್ದಾರಿಯಲ್ಲಿ ಬಿದ್ದು ತಲೆಗೆ ಗಂಭೀರ ಗಾಯವಾಯಿತು. ದುಷ್ಕರ್ಮಿಗಳು ಫೋನ್ ಕಿತ್ತುಕೊಂಡು ಪರಾರಿಯಾಗಿದ್ರು.
ತಲೆಗೆ ಗಂಭೀರ ಗಾಯಗಳಾಗಿದ್ದ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಗಾಯಗಳಿಂದ ಬಳಲುತ್ತಿದ್ದ ಆಕೆ ಭಾನುವಾರ ಕೊನೆಯುಸಿರೆಳೆದಿದ್ದಾಳೆ.
ಶುಕ್ರವಾರ (ಅಕ್ಟೋಬರ್ 27) ವೆಬ್‌ಸಿಟಿ ಫ್ಲೈಓವರ್‌ನಲ್ಲಿ ಈ ಘಟನೆ ನಡೆದ ನಂತರ ಬಲ್ಬೀರ್ ಮತ್ತು ಜಿತೇಂದ್ರ ಎಂದು ಗುರುತಿಸಲಾದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದರು. ಭಾನುವಾರ (ಅಕ್ಟೋಬರ್ 29) ಇಬ್ಬರನ್ನೂ ಬಂಧಿಸುವ ವೇಳೆ ಪೊಲೀಸರ ಗುಂಡಿನ ದಾಳಿಯಲ್ಲಿ ಗಾಯಗೊಂಡ ಬಲ್ಬೀರ್ ನನ್ನು ಬಂಧಿಸಿದ್ರೆ, ಎರಡನೇ ಆರೋಪಿ ಜಿತೇಂದ್ರ ತಪ್ಪಿಸಿಕೊಂಡಿದ್ದ. ಆದರೆ ಆತ ಅಕ್ಟೋಬರ್ 30 ರ ಸೋಮವಾರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ.