ಘಾಜಿಯಾಬಾದ್‌ನ ಕೊಳೆಗೇರಿಗಳಲ್ಲಿ ವಾಸಿಸುವ ಜನರ ಮೇಲೆ ಹಿಂದೂ ರಕ್ಷಾ ದಳದ ಕಾರ್ಯಕರ್ತರು ಹಿಂಸಾತ್ಮಕ ದಾಳಿ ನಡೆಸಿದ್ದಾರೆ. ಅವರು ಬಾಂಗ್ಲಾದೇಶೀಯರು ಎಂದು ಆರೋಪಿಸಿ ದಾಳಿ ನಡೆಸಲಾಗಿದೆ.
ಅವರನ್ನು ದೊಣ್ಣೆಗಳಿಂದ ಹೊಡೆದು, ಅವರ ಗುಡಿಸಲುಗಳನ್ನು ನಾಶಪಡಿಸಿದ್ದಲ್ಲದೇ, ಅವರ ವಸ್ತುಗಳಿಗೆ ಬೆಂಕಿ ಹಚ್ಚಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬಗಳ ಮೇಲೆ ದೌರ್ಜನ್ಯಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿಂದೂ ರಕ್ಷಾ ದಳವು ಭಾರತ ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡಿದ ನಂತರ ಈ ದಾಳಿ ನಡೆದಿದೆ.
ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಸುಧಾರಿಸದಿದ್ದಾಗ, ಕಾರ್ಯಕರ್ತರು ಶನಿವಾರ ಮಧ್ಯಾಹ್ನ ಕಾನೂನು ಕೈಗೆ ತೆಗೆದುಕೊಂಡರು. ಅವರು ಕವಿನಗರದ ಕೊಳೆಗೇರಿ ನಿವಾಸಿಗಳನ್ನು ಗುರಿಯಾಗಿಸಿಕೊಂಡು ಹಲವಾರು ಗುಡಿಸಲುಗಳನ್ನು ನಾಶಪಡಿಸಿ ಅಲ್ಲಿದ್ದ ಜನರನ್ನು ಓಡಿಸಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಸಂಜೀವ್ ಕುಮಾರ್ ಪ್ರಕಾರ, ಹಿಂದೂ ರಕ್ಷಣಾ ದಳದ ರಾಷ್ಟ್ರೀಯ ಅಧ್ಯಕ್ಷ ಭೂಪೇಂದ್ರ ಚೌಧರಿ ಎಂದೂ ಕರೆಯಲ್ಪಡುವ ಪಿಂಕಿ ಚೌಧರಿ ಮತ್ತು 15-20 ಅಪರಿಚಿತ ವ್ಯಕ್ತಿಗಳ ವಿರುದ್ಧ ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಫ್‌ಐಆರ್‌ನ ಪ್ರಕಾರ ಚೌಧರಿ ಮತ್ತು ಅವರ ಸಹಚರರು ಕೊಳೆಗೇರಿ ನಿವಾಸಿಗಳ ಮೇಲೆ ಹಲ್ಲೆ ನಡೆಸಿದ್ದಾರೆ, ಅವರ ಆಸ್ತಿಯನ್ನು ನಾಶಪಡಿಸಿದ್ದಾರೆ ಮತ್ತು ನಿವಾಸಿಗಳು ಬಾಂಗ್ಲಾದೇಶದವರಲ್ಲ ಎಂಬ ಪೊಲೀಸರು ಹೇಳಿದರೂ ಕೇಳದೇ ಕೃತ್ಯವೆಸಗಿದ್ದಾರೆ. ಪೊಲೀಸರ ಪ್ರಕಾರ, ಗುಡಿಸಲುಗಳಲ್ಲಿ ವಾಸಿಸುವ ಜನರು ಉತ್ತರ ಪ್ರದೇಶದ ಶಹಜಹಾನ್‌ಪುರದವರು ಎನ್ನಲಾಗಿದೆ.