ಮೈಸೂರು: ಕನ್ನಡದ ಪ್ರಖ್ಯಾತ ವಿಮರ್ಶಕ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದ ಪ್ರೊ.ಜಿ.ಹೆಚ್. ನಾಯಕ ನಿಧನರಾಗಿದ್ದಾರೆ.
ಅವರಿಗೆ 88 ವರ್ಷ ವಯಸ್ಸಾಗಿತ್ತು. ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶೆಯಿಂದ ಪ್ರಖ್ಯಾತರಾಗಿದ್ದ ಹಿರಿಯ ಸಾಹಿತಿ ಜಿ.ಹೆಚ್. ನಾಯಕ ಬಹುಕಾಲದ ಅಸೌಖ್ಯದಿಂದ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ, ಸಾಮಾಜಿಕ ಹೋರಾಟಗಾರ್ತಿ ಮೀರಾನಾಯಕ, ಪುತ್ರಿ ಕೀರ್ತಿ ಅವರನ್ನು ಅಗಲಿದ್ದಾರೆ,
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಸೂರ್ವೆಯಲ್ಲಿ 1935 ರ ಸೆಪ್ಟೆಂಬರ್ 18ರಂದು ಜನಿಸಿದ ಜಿ.ಹೆಚ್. ನಾಯಕ ಅವರ ಪೂರ್ಣ ಹೆಸರು ಗೋವಿಂದರಾಯ ಹಮ್ಮಣ್ಣ ನಾಯಕ. ವಿದ್ಯಾರ್ಥಿ ದೆಸೆಯಿಂದಲೂ ಮೈಸೂರಿನಲ್ಲಿಯೇ ನೆಲೆಸಿದ್ದ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಜಿ.ಹೆಚ್. ನಾಯಕ ಎಂದು ಚಿರಪರಿಚಿತರಾಗಿದ್ದಾರೆ.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದ ಅವರು ವಿಮರ್ಶೆ ಜೊತೆಗೆ ಸಂಪಾದನೆ, ಕನ್ನಡ ಸಣ್ಣ ಕಥೆಗಳು, ಹೊಸಗನ್ನಡ ಕವಿತೆಗಳನ್ನು ರಚಿಸಿದ್ದರು. ಬಾಳು ಅವರ ಆತ್ಮಕಥನವಾಗಿದೆ. ಶನಿವಾರ ಮಧ್ಯಾಹ್ನ ಮೈಸೂರಿನಲ್ಲಿಯೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಹೇಳಲಾಗಿದೆ.