
ಬೆಂಗಳೂರು: ದೇಸಿ ಹಾಗೂ ಸಾಂಪ್ರದಾಯಿಕ ತಳಿಗಳನ್ನು ಮುಂದಿನ ಪೀಳಿಗೆಗೆ ಕಾಪಾಡುವ ಉದ್ದೇಶದಿಂದ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸಿದೆ.
ಇದಕ್ಕಾಗಿ ಈ ವರ್ಷ ಐದು ಕೋಟಿ ಮೀಸಲಿಡಲಾಗಿದೆ. ಹೈಬ್ರಿಡ್ ತಳಿಗಳ ಹಾವಳಿ ಹೆಚ್ಚಾಗುತ್ತಿದ್ದು, ಭೂಮಿ ಸತ್ವಕ್ಕೆ ರಾಸಾಯನಿಕ ತೊಡಕಾಗಿದೆ. ರೋಗ ನಿರೋಧಕ ಶಕ್ತಿ ಹೊಂದಿರುವ ದೇಸಿ ತಳಿಗಳು ಕಡಿಮೆ ನೀರಿನಲ್ಲಿಯೂ ಬೆಳೆಯುತ್ತವೆ. ಇದಕ್ಕಾಗಿಯೇ ದೇಸಿ ತಳಿಗಳ ಸಂಗ್ರಹ ಸಂರಕ್ಷಣೆ ಉದ್ದೇಶದಿಂದ ರೈತರಿಗೆ ತರಬೇತಿ, ಮಾರುಕಟ್ಟೆಗೆ ಆದ್ಯತೆ ನೀಡಲು ಯೋಜನೆ ರೂಪಿಸಲಾಗಿದೆ.
ಕೃಷಿ ಇಲಾಖೆ ವತಿಯಿಂದ ಸ್ಥಳೀಯ ತಳಿಗಳ ಸಂರಕ್ಷಣೆಗೆ 5 ಕೋಟಿ ರೂಪಾಯಿ ಮೀಸಲಿಡಲಾಗಿದೆ. ರೈತರು, ರೈತ ಉತ್ಪಾದಕ ಸಂಸ್ಥೆಗಳು, ರೈತರ ಗುಂಪು, ಪ್ರಾಂತೀಯ ಒಕ್ಕೂಟ, ಕೃಷಿ ವಿಶ್ವವಿದ್ಯಾಲಯಗಳು, ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡಂತೆ ಸ್ಥಳೀಯ ತಳಿ ಸಂರಕ್ಷಣೆಗೆ ಯೋಜನೆ ರೂಪಿಸಲಾಗಿದೆ.
ರೋಗ ನಿರೋಧಕ ಶಕ್ತಿ ಹೆಚ್ಚು, ಕಡಿಮೆ ನೀರಿನಲ್ಲಿ ಉತ್ಪಾದನೆಯಾಗುವ ದೇಸಿ ತಳಿಗಳ ಸಂರಕ್ಷಣೆಗಾಗಿ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿರುವ ಏಕದಳ, ದ್ವಿದಳ ಧಾನ್ಯಗಳು, ತರಕಾರಿಗಳಲ್ಲಿನ ಸಾವಿರಾರು ಮಾದರಿಯ ದೇಸಿ ತಳಿಗಳನ್ನು ಸಂರಕ್ಷಿಸಲಾಗುವುದು. ಇವುಗಳಲ್ಲಿ ರುಚಿ, ಬಣ್ಣ, ವೈದ್ಯಕೀಯ ಗುಣಗಳಿದ್ದು, ಇವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ರೈತರಿಗೆ ಅಗತ್ಯ ತರಬೇತಿ ನೀಡಿ ಮಾರುಕಟ್ಟೆಗೆ ಆದ್ಯತೆ ನೀಡಲಾಗುವುದು ಎನ್ನಲಾಗಿದೆ.



