ವಯಸ್ಸು ತುಂಬಾ ಕಡಿಮೆ. ಆದ್ರೆ ನೋಡು ಮುದುಕನಾದಂತೆ ಕಾಣ್ತಿದ್ದಾನಲ್ವಾ ಅಂತಾ ಕೆಲವರು ಹೇಳೋದನ್ನು ನಾವು ಕೇಳಿರ್ತೇವೆ. ಇದ್ದಕ್ಕಿದ್ದಂತೆ ವಯಸ್ಸಾಗೋದು ಅಂದ್ರೇನು ಗೊತ್ತಾ ?
ಬಹುಬೇಗನೆ ವಯಸ್ಸಾಗುವ ವಿಷಯ ಹೊಸದಲ್ಲ. ಫ್ರಾನ್ಸ್ ನ ಕೊನೆಯ ರಾಣಿ ಮೇರಿ ಆಂಟೊನೆಟ್ ವಿಚಾರ ಬಹಳ ಜನಪ್ರಿಯವಾಗಿವೆ. ಆಕೆ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಸಾವನ್ನಪ್ಪಿದ್ದಳು. ಸಾವಿಗೆ ಒಂದು ದಿನ ಮೊದಲು ಕೂದಲುಗಳೆಲ್ಲ ಹಣ್ಣಾಗಿ ಮುದುಕಿಯಂತಾಗಿದ್ದಳು. ಆಕೆಗೆ ಆಗ ಬರೀ 38 ವರ್ಷ ವಯಸ್ಸಾಗಿತ್ತು. ಅಧ್ಯಯನದವೊಂದರ ಪ್ರಕಾರ, ಬೇಗ ಕೂದಲು ಬಿಳಿಯಾಗುವುದು ಮತ್ತು ವಯಸ್ಸಾಗುವುದರ ಹಿಂದೆ ಬಯಲಾಜಿಕಲ್ ಕಾರಣಗಳೂ ಇವೆ.
ಮಹಿಳೆಯರು, ಹೆರಿಗೆಯ ನಂತರ ಆರು ತಿಂಗಳಲ್ಲಿ ಏಳು ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡುತ್ತಾರೆ. ಇದರಿಂದಾಗಿ ಮೂರರಿಂದ ಏಳು ವರ್ಷಗಳಷ್ಟು ಹೆಚ್ಚು ವಯಸ್ಸಾಗುವ ಸಾಧ್ಯತೆಗಳಿವೆ. ಜರ್ನಲ್ ಸ್ಲೀಪ್ ಹೆಲ್ತ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೆರಿಗೆಯ ನಂತರ ಕಡಿಮೆ ವಿಶ್ರಾಂತಿ ಪಡೆದ ಮಹಿಳೆಯರು, ಹೆಚ್ಚು ವಿಶ್ರಾಂತಿ ಮತ್ತು ನಿದ್ರೆ ಮಾಡುವ ಮಹಿಳೆಯರಿಗಿಂತ ಬೇಗನೆ ವಯಸ್ಸಾದಂತೆ ಕಾಣುತ್ತಾರೆ.
ಇದರ ಜೊತೆ ಧೂಮಪಾನ, ಅತಿಯಾದ ಮದ್ಯಪಾನ, ಅಧಿಕ ತೂಕ ಅಥವಾ ಬೊಜ್ಜು, ಬೇಗನೆ ವಯಸ್ಸಾದಂತೆ ಕಾಣಲು ಕಾರಣವಾಗುತ್ತದೆ. ಯೇಲ್ ವಿಶ್ವ ವಿದ್ಯಾನಿಲಯವು 2019 ರಲ್ಲಿ ಪ್ರಕಟಿಸಿದ ಮಾಹಿತಿ ಪ್ರಕಾರ, 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 2,339 ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ ಇನ್ನೂ ಕೆಲ ಸಂಗತಿ ಬಹಿರಂಗವಾಗಿದೆ. ನಿರುದ್ಯೋಗ, ಮಕ್ಕಳ ಸಮಸ್ಯೆ,ಗುಣಪಡಿಸಲಾಗದಂತಹ ಕಾಯಿಲೆ ಕೂಡ ಇದಕ್ಕೆ ಕಾರಣವಾಗುತ್ತದೆ. ಇದರ ಹೊರತಾಗಿ ಅನುವಂಶೀಯತೆ ಕೂಡ ವಯಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಕೂದಲಿನ ಬಣ್ಣ ಕ್ರಮೇಣ ಬೂದುಬಣ್ಣ ಅಥವಾ ಬಿಳಿ ಬಣ್ಣವಾಗುವುದು ವಯಸ್ಸಾಗುವಿಕೆಯ ಸಾಮಾನ್ಯ ಲಕ್ಷಣವಾಗಿದೆ. ಕೆಲವರಿಗೆ ಇದ್ದಕ್ಕಿದ್ದಂತೆ ಕೂದಲು ಬಿಳಿಯಾಗುತ್ತದೆ. ಇದರ ಹಿಂದಿನ ಕಾರಣ, ದೈನಂದಿನ ಮಾನಸಿಕ ಒತ್ತಡ. ಇದು ನರಮಂಡಲದ ಮೇಲೆ ಅತಿ ಹೆಚ್ಚಿನ ಪರಿಣಾಮ ಬೀರುತ್ತದೆ.