
ಸ್ವಯಂಘೋಷಿತ ಕ್ರಾಂತಿಕಾರಿಗಳಿಂದ ತನ್ನ ಮನೆಯನ್ನು ಧ್ವಂಸಗೊಳಿಸಲಾಗಿದೆ ಮತ್ತು ತನ್ನ ಕುಟುಂಬವನ್ನು ಭಾರತಕ್ಕೆ ಪಲಾಯನ ಮಾಡುವಂತೆ ಒತ್ತಾಯಿಸಿ ಕೊಲೆ ಬೆದರಿಕೆಗಳನ್ನು ಹಾಕಲಾಗುತ್ತಿದೆ ಎಂದು ಮಹಿಳೆ ವಿಡಿಯೋದಲ್ಲಿ ವಿವರಿಸಿದ್ದಾರೆ. ಅಲ್ಲಿನ ಪರಿಸ್ಥಿತಿ ವಿವರಿಸುವಾಗ ಅವರ ಕಣ್ಣೀರು ಮತ್ತು ನೋವಿನ ಭಾವನಾತ್ಮಕ ಮಾತುಗಳು ಮಹಿಳೆಯ ವೇದನೆಯನ್ನು ತಿಳಿಸಿವೆ.
ಕ್ರಾಂತಿಕಾರಿಗಳೆಂದು ಕರೆಯಲ್ಪಡುವವರು ನನ್ನ ಮನೆಯನ್ನು ಧ್ವಂಸಗೊಳಿಸಿದರು. ನನ್ನ ಕುಟುಂಬ ಮತ್ತು ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ ಮತ್ತು ನಾವು ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಪಲಾಯನ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ನಾನು ಬಾಂಗ್ಲಾದೇಶದ ಪ್ರಜೆಯಲ್ಲವೇ? ನಾನು ಇಲ್ಲಿ ಬದುಕಲು ಸ್ವತಂತ್ರಳಲ್ಲವೇ? ನಾನು ಮತ್ತು ನನ್ನ ಕುಟುಂಬ ಭಾರತದಲ್ಲಿ ಏಕೆ ಆಶ್ರಯ ಪಡೆಯಬೇಕು? ನಾವು ಹಿಂದೂಗಳು ಎಂಬ ಕಾರಣಕ್ಕಾಗಿಯೇ?’’ ಎಂದು ಮಹಿಳೆ ಭಾವುಕರಾಗಿ ಹೇಳಿದ್ದಾರೆ.
ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಯ ನಂತರದ ಇತ್ತೀಚಿನ ರಾಜಕೀಯ ಅಸ್ಥಿರತೆಯನ್ನು ಇಸ್ಲಾಮಿಸ್ಟ್ ಉಗ್ರಗಾಮಿಗಳು ಬಳಸಿಕೊಳ್ಳುತ್ತಿರುವುದರಿಂದ ಬಾಂಗ್ಲಾದೇಶವು ಪ್ರಸ್ತುತ ಪ್ರಕ್ಷುಬ್ಧತೆಯಿಂದ ಮುಳುಗಿದೆ. ಉಗ್ರಗಾಮಿ ಗುಂಪುಗಳು ಹಿಂದೂ ಅಲ್ಪಸಂಖ್ಯಾತರ ಮೇಲೆ ತಮ್ಮ ದಾಳಿಯನ್ನು ಹೆಚ್ಚಿಸಿದ್ದು ಮನೆಗಳನ್ನು ಸುಡುವುದು, ಮಹಿಳೆಯರ ಅಪಹರಣ ಮತ್ತು ವ್ಯಾಪಕ ಹಿಂಸಾಚಾರ ಎಬ್ಬಿಸಿದ್ದಾರೆ.
ಗಲಭೆ ಪೀಡಿತ ಪ್ರದೇಶಗಳಿಂದ ಪ್ರತ್ಯಕ್ಷದರ್ಶಿಗಳ ವರದಿಗಳು ಮತ್ತು ವೀಡಿಯೊಗಳು ಭಯಾನಕ ಚಿತ್ರಣವನ್ನು ತಿಳಿಸಿವೆ. ಇಸ್ಕಾನ್ ಮತ್ತು ಕಾಳಿ ದೇವಸ್ಥಾನ ಸೇರಿದಂತೆ ಹಿಂದೂ ಮನೆಗಳು ಮತ್ತು ದೇವಾಲಯಗಳನ್ನು ಲೂಟಿ ಮಾಡಿದ್ದು ಬೆಂಕಿ ಹಚ್ಚಲಾಗಿದೆ. ಮಹಿಳೆಯರನ್ನು ಅಪಹರಿಸಿ ಅಜ್ಞಾತ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ. ದಾಳಿಕೋರರು ಕಾನೂನು ನಿರ್ಲಕ್ಷಿಸಿ ಮಾನವ ಜೀವಕ್ಕೆ ಹಾನಿ ಮಾಡ್ತಿದ್ದಾರೆ.