ಚಂದ್ರಾಪುರ: ಕೋವಿಡ್-19 ಲಸಿಕೆ ಅಭಿಯಾನವು ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿದ್ದರೂ, ಹಲವಾರು ನಾಗರಿಕರು ಇನ್ನೂ ಕೂಡ ಲಸಿಕೆ ಹಾಕಿಸಿಕೊಂಡಿಲ್ಲ. ರಾಜ್ಯ ಸರ್ಕಾರಗಳು ಮತ್ತು ಸಂಸ್ಥೆಗಳು ಜನರನ್ನು ಲಸಿಕೆ ಹಾಕಲು ಪ್ರೋತ್ಸಾಹಿಸುತ್ತಿವೆ.
ಕೋವಿಡ್-19 ವಿರುದ್ಧ ಹೆಚ್ಚು ಹೆಚ್ಚು ಜನರಿಗೆ ಚುಚ್ಚುಮದ್ದು ಹಾಕಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಮಹಾರಾಷ್ಟ್ರದ ಚಂದ್ರಾಪುರ್ ಮುನ್ಸಿಪಲ್ ಕಾರ್ಪೊರೇಷನ್ ಲಸಿಕೆ ಬಂಪರ್ ಲಕ್ಕಿ ಡ್ರಾವನ್ನು ಘೋಷಿಸಿದೆ. ಎಲ್ಇಡಿ ಟಿವಿಗಳು, ರೆಫ್ರಿಜರೇಟರ್‌ಗಳಿಂದ ಹಿಡಿದು ವಾಷಿಂಗ್ ಮೆಷಿನ್‌ಗಳವರೆಗೆ ಬಹುಮಾನಗಳನ್ನು ಘೋಷಿಸಿವೆ.
ನವೆಂಬರ್ 12 ರಿಂದ 24ರ ವರೆಗೆ ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಗಳಿಗೆ ಬರುವ ನಾಗರಿಕರು ಈ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ ಎಂದು ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ. ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಮತ್ತು ಎಲ್‌ಇಡಿ ಟೆಲಿವಿಷನ್ ಸೆಟ್ ಅನ್ನು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ನೀಡಲಾಗುವುದು ಎಂದು ಘೋಷಿಸಲಾಗಿದೆ.
ಮೇಯರ್ ರಾಖಿ ಸಂಜಯ್ ಕಂಚಾರ್ಲವರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ನಾಗರಿಕರಿಗೆ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಯಿತು. ಅಲ್ಲದೆ, 10 ನಾಗರಿಕರು ಮಿಕ್ಸರ್-ಗ್ರೈಂಡರ್‌ಗಳನ್ನು ಸಮಾಧಾನಕರ ಬಹುಮಾನವಾಗಿ ಪಡೆಯುತ್ತಾರೆ ಎಂದು ಹೇಳಲಾಗಿದೆ.
ಇಲ್ಲಿಯವರೆಗೆ, ಚಂದ್ರಾಪುರ ನಗರದಲ್ಲಿ 1,93,581 ನಾಗರಿಕರು ತಮ್ಮ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದರೆ, 99,620 ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ನಗರದಲ್ಲಿ ಒಟ್ಟು ಅರ್ಹ ವ್ಯಕ್ತಿಗಳ ಸಂಖ್ಯೆಗೆ ಹೋಲಿಸಿದರೆ ಲಸಿಕೆಗಳನ್ನು ಪಡೆದವರ ಸಂಖ್ಯೆ ಕಡಿಮೆಯಿದೆ ಎನ್ನಲಾಗಿದೆ.