ಛತ್ತೀಸ್ಗಡದಲ್ಲಿ ವಿಲಕ್ಷಣ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಮದುವೆಯಾಗಿ ಬಹುಕಾಲದವರೆಗೆ ಮಕ್ಕಳಾಗದವರಿಗೆ ನಾನು ನೀಡುವ ನಿಂಬೆಹಣ್ಣನ್ನು ನೆಕ್ಕಿದರೆ 15 ನಿಮಿಷಗಳಲ್ಲೇ ನೀವು ಗರ್ಭಿಣಿಯಾಗುತ್ತೀರಿ ಎಂದು ಢೋಂಗಿ ಬಾಬಾನೊಬ್ಬ ಹೇಳಿದ್ದು, ಇದನ್ನು ನಂಬಿ ಆತನ ಆಶ್ರಮದ ಮುಂದೆ ಮಹಿಳೆಯರೂ ಸೇರಿದಂತೆ ಜನ ಜಾತ್ರೆಯೇ ನೆರೆದಿದ್ದ ಘಟನೆ ನಡೆದಿದೆ.
ಛತ್ತೀಸ್ಗಡದ ಮಹಾಸಮುಂದ್ ಜಿಲ್ಲೆಯ ಬೂಟಿಪಲ್ಲಿ ಗ್ರಾಮದ 36 ವರ್ಷದ ಪಿತಾಂಬರ್ ಜಗತ್ ಅಲಿಯಾಸ್ ‘ಬೂಟಿವಾಲೆ ಬಾಬಾ’ ಪ್ರತಿ ಮಂಗಳವಾರ ಹಾಗೂ ಶನಿವಾರದಂದು ದರ್ಬಾರ್ ನಡೆಸುತ್ತಿದ್ದ. ಮಕ್ಕಳಾಗದ ಮಹಿಳೆಯರು ಇಲ್ಲಿಗೆ ಭೇಟಿ ನೀಡಿದರೆ ನಾನು ನೀಡುವ ನಿಂಬೆಹಣ್ಣು ನೆಕ್ಕಿದರೆ 15 ನಿಮಿಷಗಳಲ್ಲೇ ನೀವು ಗರ್ಭಿಣಿಯಾಗುತ್ತೀರಿ ಎಂದು ಭರವಸೆ ನೀಡಿದ್ದ.
ಇದನ್ನು ನಂಬಿದ ಮಹಿಳೆಯರು ಮಂಗಳವಾರ ಮತ್ತು ಶನಿವಾರದಂದು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದು, ಈ ಡೋಂಗಿ ಬಾಬಾನ ವಿಚಾರ ಪಕ್ಕದ ಜಿಲ್ಲೆಗಳು ಮಾತ್ರವಲ್ಲದೆ ಜಾರ್ಖಂಡ್, ಒಡಿಶಾವರೆಗೂ ಹಬ್ಬಿತ್ತು. ಇದು ಸ್ಥಳೀಯ ಅಂಧ ಶ್ರದ್ಧಾ ನಿರ್ಮೂಲನಾ ಸಮಿತಿಯ ಡಾ. ದಿನೇಶ್ ಮಿಶ್ರಾ ಅವರ ಗಮನಕ್ಕೆ ಬಂದಿದ್ದು, ಜಿಲ್ಲಾಡಳಿತಕ್ಕೆ ವಿಷಯ ಮುಟ್ಟಿಸಿದ್ದರು. ಇದೀಗ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಬಾಬಾನ ದರ್ಬಾರಿಗೆ ತೆರೆ ಎಳೆದಿದ್ದಾರೆ. ಅಲ್ಲದೆ ಸಾರ್ವಜನಿಕರು ಇಂತಹ ಢೋಂಗಿ ಬಾಬಾಗಳ ಮೇಲೆ ಅಂಧ ವಿಶ್ವಾಸ ಹೊಂದಬಾರದು ಎಂದು ಮನವಿ ಮಾಡಿದ್ದಾರೆ.