ಮಂಗಳೂರು: ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ 7ನೇ ತರಗತಿಯಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿರುವ ವಿಚಾರ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಶಿಕ್ಷಕಿ ಅಮಾನತು ಮಾಡಿದ ಬೆನ್ನಲ್ಲೇ ಇದೀಗ ವಿದ್ಯಾರ್ಥಿನಿಯ ತಾಯಿಗೆ ವಿದೇಶದಿಂದ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಆರೋಪಿಸಲಾಗಿದೆ.
ಜೆರೋಸಾ ಶಾಲೆಯ ಶಿಕ್ಷಕಿ ತರಗತಿಯಲ್ಲಿ ಪಾಠ ಮಾಡುವ ವೇಳೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಕುರಿತ ವಿಡಿಯೋಗಳು ಕೂಡ ವೈರಲ್ ಆಗಿತ್ತು. ಶಿಕ್ಷಕಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ನಡೆಸಿದ್ದರು. ಪ್ರಕರಣ ರಾಜಕೀಯ ತಿರುವು ಪಡೆದಿತ್ತು. ಬಳಿಕ ಶಿಕ್ಷಕಿ ಪ್ರಭಾರನ್ನು ಅಮಾನತು ಮಾಡಲಾಗಿತ್ತು.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ 7 ನೇತರಗತಿ ವಿದ್ಯಾರ್ಥಿನಿಯೋರ್ವರ ತಾಯಿ ಕವಿತಾ ಎಂಬುವವರಿಗೆ ವಿದೇಶದಿಂದ ಕರೆ ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಕವಿತಾ ಪ್ರತಿಕ್ರಿಯಿಸಿದ್ದು, ಎರಡು ಮೂರು ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ಕ್ಲಾಸ್ ರೂಮ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿದ್ದೀರಾ . ಎಲ್ಲಾ ಘಟನೆಗಳಿಗೂ ನೀವೇ ಕರಣ ಎಂದು ಆರೋಪಿಸಿ ಬೆದರಿಸುತ್ತಿದ್ದಾರೆ ಎಂದು ಕತಾರ್, ದುಬೈ, ಸೌದಿಯಿಂದ ಕರೆ ಮಾಡಿ ಬೆದರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ನನ್ನ ಮೊಬೈಲ್ ನಂಬರ್ ಗಳನ್ನು ಪೋಸ್ಟ್ ಮಾಡಿ ಹರಿಬಿಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಗಿ ಕವಿತಾ ತಿಳಿಸಿದ್ದಾರೆ.