ಪ್ರೀತಿಗೆ ಯಾವುದೇ ಭಾಷೆಯಿಲ್ಲ ಎಂದು ಸಾರುವ ಲೆಕ್ಕವಿಲ್ಲದಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಅಂತಹ ಒಂದು ಲವ್ ಸ್ಟೋರಿಯಲ್ಲಿ ಜರ್ಮನಿಯ ಯುವತಿಯೊಬ್ಬರು ಬಿಹಾರದ ನವಾಡದ ವ್ಯಕ್ತಿಯೊಂದಿಗೆ ಪೂರ್ಣ ದೇಸೀ ಸಂಪ್ರದಾಯದಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಅವರ ಈ ಕನಸಿನ ಮದುವೆ ಸಮಾರಂಭದ ಚಿತ್ರಗಳ ಆನ್ಲೈನ್‌ನಲ್ಲಿ ವೈರಲ್ ಆಗಿವೆ.
ಜರ್ಮನಿಯಲ್ಲಿ ಹುಟ್ಟಿ ಬೆಳೆದ ಲಾರಿಸಾ ಬೆಲ್ಶ್ ಹೆಸರಿನ ಯುವತಿ ಬಿಹಾರದ ನವಾಡಾದ ಸತ್ಯೇಂದ್ರ ಕುಮಾರ್‌ರನ್ನು ವರಿಸಿದ್ದಾರೆ. ಸ್ವೀಡನ್‌ನಲ್ಲಿ ಸಂಶೋಧನಾ ವಿದ್ಯಾರ್ಥಿಗಳಾಗಿ ಅಧ್ಯಯನ ಮಾಡುತ್ತಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಚರ್ಮದ ಕ್ಯಾನ್ಸರ್ ಬಗ್ಗೆ ಸತ್ಯೇಂದ್ರ ಸಂಶೋಧನೆ ಮಾಡುತ್ತಿದ್ದರೆ ಲಾರಿಸಾ ಪ್ರೊಸ್ಟೇಟ್ ಕ್ಯಾನ್ಸರ್ ಮೇಲೆ ಸಂಶೋಧನೆ ಮಾಡಿದ್ದಾರೆ.
ಮದುವೆ ದಿನ ವಧುವಿನ ಹೇರ್ ಸ್ಟೈಲ್ ಹೇಗಿದ್ದರೆ ಚೆಂದ….?
2019ರಲ್ಲಿ ಮೊದಲ ಬಾರಿಗೆ ಭೇಟಿಯಾದ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೇಮವಾಗಿ ತಿರುಗಿ ಇದೀಗ ಮದುವೆಯಲ್ಲಿ ಅಂತ್ಯವಾಗಿದೆ.
ನೀಲಿ ಮತ್ತು ಕೆಂಪು ಲೆಹಂಗಾದಲ್ಲಿ ಮಿನುಗುತ್ತಾ ದೇಸೀ ವಧುವಿನಂತೆ ಕಂಗೊಳಿಸುತ್ತಿರುವ ಲಾರಿಸಾ, ಶೇರ್ವಾನಿಯಲ್ಲಿ ಮಿಂಚುತ್ತಿದ್ದ ಸತ್ಯೇಂದ್ರ ಜೊತೆಗೆ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದಲ್ಲೇ ಮದುವೆಯಾಗಬೇಕೆಂದು ಇಬ್ಬರಿಗೂ ಆಸೆ ಇತ್ತು.
“ನಾನು ನನ್ನ ಜೀವನವನ್ನು ಆಸ್ವಾದಿಸಲು ಭಾರತಕ್ಕೆ ಬಂದಿದ್ದೇನೆ. ಇಲ್ಲಿನ ಜನರು ಒಳ್ಳೆಯವರು. ನಮ್ಮ ಸಂಸ್ಕೃತಿಗಳ ನಡುವೆ ಭಿನ್ನತೆಗಳಿವೆ. ನನಗೆ ಹಿಂದಿ ಅಷ್ಟಾಗಿ ಅರ್ಥವಾಗದು ಆದರೆ ಸತ್ಯೇಂದ್ರ ಈ ವಿಷಯದಲ್ಲಿ ಸಹಾಯ ಮಾಡುತ್ತಾರೆ” ಎನ್ನುತ್ತಾರೆ ಲಾರಿಸಾ.
ಸತ್ಯೇಂದ್ರ ಜೊತೆಗೆ ಮದುವೆಯಾಗಲು ಭಾರತಕ್ಕೆ ವಿಶೇಷ ವೀಸಾ ಪಡೆದು ದೇಶಕ್ಕೆ ಆಗಮಿಸಿದ್ದಾರೆ ಲಾರಿಸಾ.