ಜೈಪುರ: ವಿದೇಶಿಗರು ಭಾರತೀಯ ಆಹಾರವನ್ನು ಬೇಯಿಸುವುದು ಅಥವಾ ಸಾಂಪ್ರದಾಯಿಕ ಬಟ್ಟೆಗಳನ್ನು ಪ್ರಯೋಗಿಸುವುದು ಹೇಗೆ ಎಂಬುದನ್ನು ಕಲಿಯುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಆದರೆ ಇದೀಗ ಜರ್ಮನ್ ಮಹಿಳೆಯೊಬ್ಬರು ಭಾರತದ ಹೊಲಗಳಲ್ಲಿ ಕೃಷಿ ಮಾಡುತ್ತಿರುವ ಅಪರೂಪದ ವಿಡಿಯೋವೊಂದು ವೈರಲ್ ಆಗಿದ್ದು, ಇದು ಭಾರಿ ಪ್ರಶಂಸೆ ಗಳಿಸಿದೆ.
ಮಹಿಳೆ ಜೂಲಿ ಶರ್ಮಾ ಭಾರತೀಯ ವ್ಯಕ್ತಿಯನ್ನು ಮದುವೆಯಾಗಿದ್ದು, ಎರಡು ವರ್ಷಗಳಿಂದ ಜೈಪುರದಲ್ಲಿ ವಾಸಿಸುತ್ತಿದ್ದಾರೆ. ತಾನು ಈರುಳ್ಳಿ ಬಿತ್ತನೆ ಮಾಡುತ್ತಿರುವ ವಿಡಿಯೋ ಅನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆ ‘ನಮಸ್ತೆ ಜೂಲಿ’ಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಜೂಲಿ ಅವರು ತಮ್ಮ ಅತ್ತೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ತುಂಬಾ ನುರಿತ ಕೃಷಿಕಳಂತೆ ಈಕೆ ಗದ್ದೆಯೊಂದರಲ್ಲಿ ಈರುಳ್ಳಿಯನ್ನು ನೆಡಲು ನೆಲವನ್ನು ಸಿದ್ಧಪಡಿಸುತ್ತಿರುವುದನ್ನು ತೋರಿಸುತ್ತದೆ. ಆಕೆಯ ಪತಿ ಅರ್ಜುನ್ ಇದರ ವಿಡಿಯೋ ಮಾಡಿಕೊಂಡು ಶೇರ್ ಮಾಡಿದ್ದಾರೆ.
ನಾನು ಕುಟುಂಬದೊಂದಿಗೆ ಸರಳ ಜೀವನವನ್ನು ಆನಂದಿಸುತ್ತೇನೆ, ಈಗಾಗಲೇ 1 ತಿಂಗಳಿನಿಂದ ನನ್ನ ಗಂಡನ ಹಳ್ಳಿಯಲ್ಲಿ ವಾಸಿಸುತ್ತಿದ್ದೇನೆ ಮತ್ತು ನಾನು ಕುಟುಂಬದೊಂದಿಗೆ ಮತ್ತು ಪ್ರಕೃತಿಗೆ ತುಂಬಾ ಹತ್ತಿರವಾಗಿ ಬದುಕುತ್ತಿದ್ದೇನೆ ಎಂದು ಜೂಲಿ ಹೇಳಿಕೊಂಡಿದ್ದು, ಈ ವಿಡಿಯೋಗ 30 ಮಿಲಿಯನ್ಗೂ ಅಧಿಕ ಮಂದಿ ಮೆಚ್ಚುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಕೃಷಿ, ಹಳ್ಳಿ ಎಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ವಿದೇಶದ ಯುವತಿಯೊಬ್ಬಳು ಮಾದರಿಯಾಗಬೇಕಿದೆ ಎಂದು ಹಲವರು ಕಮೆಂಟ್ನಲ್ಲಿ ತಿಳಿಸಿದ್ದಾರೆ.