ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಕೆಲವೊಮ್ಮೆ ನಾವು ಕೆಲವು ಮುಖ್ಯವಾದ ಜವಾಬ್ದಾರಿಗಳನ್ನೇ ಮರೆತುಬಿಡುತ್ತೇವೆ. ಹಾಗೇ ಕೆಲವು ಟೆಸ್ಟ್ ಗಳನ್ನು ಕೂಡ ಮಾಡಿಸಿಕೊಳ್ಳುವುದಿಲ್ಲ. ನಮ್ಮ ಶರೀರದಲ್ಲಿನ ಆಂತರಿಕ ಬದಲಾವಣೆಗಳನ್ನು, ಕೊರತೆಗಳನ್ನು ತಿಳಿಯುವ ಜವಾಬ್ದಾರಿಯನ್ನು ಸ್ವತಃ ನಾವೇ ತೆಗೆದುಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಕೆಲವು ಟೆಸ್ಟ್ ಗಳನ್ನು ಮಾಡಿಸಿಕೊಳ್ಳುವುದರಿಂದ ಅನೇಕ ರೋಗಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು. ಹೀಗೆ ನಾವು ಮಾಡಿಸಿಕೊಳ್ಳಬೇಕಾದ ಟೆಸ್ಟ್ ಗಳ ಪೈಕಿ ಜೆನೆಟಿಕ್ ಟೆಸ್ಟ್ ಕೂಡ ಒಂದು.
ವೈದ್ಯರು ಹೇಳುವ ಪ್ರಕಾರ, ಪ್ರೆಗ್ನೆನ್ಸಿ ಗೂ ಮೊದಲು ಜೆನೆಟಿಕ್ ಟೆಸ್ಟ್ ಮಾಡಿಸುವುದರಿಂದ ಮಗುವನ್ನು ಅನೇಕ ಆನುವಂಶಿಕ ರೋಗಗಳಿಂದ ದೂರವಿರಬಹುದು. ವೈದ್ಯಕೀಯ ವಿಜ್ಞಾನ ಹೇಳುವಂತೆ ತಂದೆ – ತಾಯಿಯ ಜೀನ್ಸ್ ಮೂಲಕ ಗರ್ಭದಲ್ಲಿ ಮಗು ಬೆಳೆಯುತ್ತದೆ. ಹೀಗಿರುವಾಗ ತಂದೆ ಅಥವಾ ತಾಯಿಯಲ್ಲಿ ಯಾರಾದರು ಒಬ್ಬರು ಯಾವುದಾದರೂ ಖಾಯಿಲೆಯಿಂದ ಬಳಲುತ್ತಿದ್ದರೆ ಆಗ ಹುಟ್ಟುವ ಮಗು ಕೂಡ ಅದೇ ಸಮಸ್ಯೆ ಎದುರಿಸಬೇಕಾಗುತ್ತದೆ. ಹುಟ್ಟುವ ಮಗುವನ್ನು ಇಂತಹ ಸಮಸ್ಯೆಯಿಂದ ದೂರವಿಡಲು ಜೆನೆಟಿಕ್ ಟೆಸ್ಟ್ ಬಹಳ ಉಪಯುಕ್ತವಾಗಿದೆ.
ಜೆನೆಟಿಕ್ ಟೆಸ್ಟ್ ಮಾಡಿಸಿಕೊಳ್ಳುವುದರಿಂದ ಶರೀರದಲ್ಲಿನ ಆನುವಂಶಿಕ ತೊಂದರೆ ತಿಳಿಯುತ್ತದೆ. ಇದರಿಂದ ಪ್ರಸವಪೂರ್ವ ಪರೀಕ್ಷೆ, ನವಜಾತ ಸ್ಕ್ರೀನಿಂಗ್, ಐವಿಎಫ್ ಮುಂತಾದವು ಭ್ರೂಣದಲ್ಲಿರುವ ಆನುವಂಶಿಕ ಪರಿಸ್ಥಿತಿಯನ್ನು ಪತ್ತೆಮಾಡಿ ಹುಟ್ಟಲಿರುವ ಮಗುವನ್ನು ಆನುವಂಶಿಕ ಅಸ್ವಸ್ಥತೆಯಿಂದ ಕಾಪಾಡುತ್ತವೆ.
ಜೆನೆಟಿಕ್ ಟೆಸ್ಟ್ ಅನ್ನು ಪುರುಷರು ಮಾಡಿಸಿಕೊಳ್ಳಲೇಬೇಕು. ಏಕೆಂದರೆ ಈ ಪರೀಕ್ಷೆಯಿಂದ ಹೃದಯದ ತೊಂದರೆಯನ್ನು ಕೂಡ ಸುಲಭವಾಗಿ ಕಂಡುಹಿಡಿಯಬಹುದು. ಇದಲ್ಲದೇ ಪುರುಷರ ಜೀನ್ ನಲ್ಲಾಗುವ ಬದಲಾವಣೆ ಮತ್ತು ಅವರ ಬಂಜೆತನದ ಬಗ್ಗೆ ಕೂಡ ತಿಳಿಯಬಹುದಾಗಿದೆ. ಈ ಜೆನೆಟಿಕ್ ಟೆಸ್ಟ್ ಅನ್ನು ಎಲ್ಲರೂ ಮಾಡಿಸಿಕೊಳ್ಳದೇ ಇದ್ದರು ಆನುವಂಶಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುವವರು ವೈದ್ಯರೊಂದಿಗೆ ಮಾತನಾಡಿ ನಂತರ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.