ಆಧಾರವೇ ಇಲ್ಲದೇ ಮಾಡಲಾಗುವ ವರದಕ್ಷಿಣೆ ಕಿರುಕುಳದ ಆಪಾದನೆಗಳಿಂದ ಪುರುಷನ ಹಾಗೂ ಆತನ ಸಂಬಂಧಿಗಳ ಘನತೆಗೆ ಭಾರೀ ಪೆಟ್ಟು ಬೀಳುವ ಕಾರಣದಿಂದ, ಈ ಕಾನೂನಿನ ದುರ್ಬಳಕೆಯನ್ನು ತಪ್ಪಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
“ಸಾಮಾನ್ಯ ಆರೋಪಗಳ ಆಧಾರದ ಮೇಲೆಯೇ ದೂರುದಾರರ ಪತಿ ಹಾಗೂ ಆತನ ಸಂಬಂಧಿಕರನ್ನು ವಿಚಾರಣೆಗೆ ಒಳಪಡುವಂತೆ ಮಾಡುವುದು ಸರಿಯಲ್ಲ. ಖುಲಾಸೆಯಲ್ಲಿ ಅಂತ್ಯಗೊಳ್ಳುವ ಕ್ರಿಮಿನಲ್ ವಿಚಾರಣೆಯಿಂದಾಗಿ ಆಪಾದಿತರ ಗೌರವಕ್ಕೆ ಧಕ್ಕೆಯುಂಟಾಗುವ ಕಾರಣ ಇಂಥ ಪ್ರವೃತ್ತಿಗಳಿಗೆ ಪ್ರಚೋದನೆ ನೀಡಬಾರದು,” ಎಂದು ನ್ಯಾಯಾಧೀಶರಾದ ಎಸ್. ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಇದ್ದ ಪೀಠ ತಿಳಿಸಿದೆ.
ಮೊಬೈಲ್ ಬಳಸಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ
ಕಾರು ವರದಕ್ಷಿಣೆಯ ಬೇಡಿಕೆ ಮುಂದಿಟ್ಟು, ಹಾಗೆ ಮಾಡದೇ ಇದ್ದಲ್ಲಿ ತನ್ನ ಮಡದಿಯ ಗರ್ಭಧಾರಣೆಯನ್ನೇ ಅಂತ್ಯಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದ ಆಪಾದನೆ ಮೇಲೆ ತಮ್ಮ ವಿರುದ್ಧ ಸಲ್ಲಿಸಲಾದ ಎಫ್‌ಐಆರ್‌ಅನ್ನು ವಜಾಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿಗೆ ಪಟನಾ ಹೈಕೋರ್ಟ್ ಕೊಟ್ಟ ತೀರ್ಪಿನ ವಿರುದ್ಧ ಮೊಹಮ್ಮದ್ ಇಕ್ರಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಏಪ್ರಿಲ್ 1, 2019ರಲ್ಲಿ ದಾಖಲಾದ ಈ ಎಫ್‌ಐಆರ್‌ನಲ್ಲಿ ತನ್ನ ಮೇಲೆ ಮಾನಸಿಕ ಕಿರುಕುಳ ಕೊಟ್ಟು, ಗರ್ಭಪಾತ ಮಾಡುವ ಬೆದರಿಕೆಯೊಡ್ಡಿರುವುದಾಗಿ ದೂರುದಾರರು ಹೇಳಿಕೊಂಡು ಸಾಮಾನ್ಯವಾದ ಆಪಾದನೆಗಳನ್ನೇ ದೂರಿನಲ್ಲಿ ನೀಡಿದ್ದಾರೆ ಎಂದು ತಿಳಿಸಿದ ಕೋರ್ಟ್, ಸಣ್ಣಪುಟ್ಟ ಕಚ್ಚಾಟಗಳಿಗೆಲ್ಲಾ ಹೀಗೆ ಎಫ್‌ಐಆರ್ ಸಲ್ಲಿಸಲು ಬಾರದು ಎಂದಿದೆ.
ಇದೇ ವೇಳೆ, ಭಾರತೀಯ ದಂಡ ಸಂಹಿತೆಯ 498ಎ ವಿಧಿಯ ದುರ್ಬಳಕೆಯ ನಿದರ್ಶನಗಳು ಹೆಚ್ಚುತ್ತಿರುವ ಕುರಿತು ಉಲ್ಲೇಖ ಮಾಡಿದ ನ್ಯಾಯಾಲಯ, “ಇಂಥ ಆಪಾದನೆಗಳನ್ನು ಮಾಡಿದಾಗ ಪರಿಶೀಲನೆ ಮಾಡಿ ನೋಡದೇ ಇದ್ದಲ್ಲಿ ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಪ್ರಾಥಮಿಕ ಹಂತದಲ್ಲಿ ಪ್ರಬಲವಾದ ದೂರುಗಳಿಲ್ಲದೇ ಪತಿ ಹಾಗೂ ಆತನ ಸಂಬಂಧಿಕರ ವಿರುದ್ಧ ಕ್ರಮಗಳಿಗೆ ಮುಂದಾಗದಂತೆ ಕೆಳ ಹಂತದ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ತನ್ನ ಆದೇಶದ ಮೂಲಕ ಸೂಚಿಸಿದೆ.