
ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ ಯಾವುದೇ ಗೀಲನ್ ಬಾ ಸಿಂಡ್ರೋಮ್(ಜಿಬಿಎಸ್) ಮರಣ ಪ್ರಕರಣ ದೃಢಪಟ್ಟಿಲ್ಲವೆಂದು ಆರೋಗ್ಯ ಇಲಾಖೆ ಹೇಳಿದೆ.
ಚಿಕ್ಕೋಡಿಯ ಡೆಣಿವಾಡಿ ಗ್ರಾಮದ 64 ವರ್ಷದ ವ್ಯಕ್ತಿ ಮತ್ತು ಸಂಕೇಶ್ವರ ಪಟ್ಟಣದ 14 ವರ್ಷದ ಬಾಲಕನ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಈ ಎರಡೂ ಪ್ರಕರಣಗಳಲ್ಲಿ ವೈದ್ಯರು ಸಂಶಯಾಸ್ಪದ ಜಿಬಿಎಸ್ ಕಾಯಿಲೆ ಎಂದು ಪರಿಗಣಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಇದೇ ಕಾಯಿಲೆ ಎಂದು ಖಚಿತವಾಗಿಲ್ಲ. ಮೃತಪಟ್ಟ ಇಬ್ಬರೂ ವಾಸಿಸುತ್ತಿದ್ದ ಪಟ್ಟಣ ಮತ್ತು ಗ್ರಾಮಕ್ಕೆ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಸಮೀಕ್ಷೆ ಕಾರ್ಯ ಕೈಗೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಇಂಟಿಗ್ರೇಟೆಡ್ ದಿಸೀಸ್ ಸರ್ವೆಲೆನ್ಸ್ ಪ್ರಾಜೆಕ್ಟ್ ನಿರ್ದೇಶಕರು ಹೇಳಿದ್ದಾರೆ.