ನವದೆಹಲಿ: ಕೇಂದ್ರ ಸರ್ಕಾರ ನೌಕರರಿಗೆ ನಿವೃತ್ತಿ ನಂತರ ಆರ್ಥಿಕ ಭದ್ರತೆ ಖಾತರಿ ನೀಡುವ ಏಕೀಕೃತ ಪಿಂಚಣಿ ಯೋಜನೆ(ಯುಪಿಎಸ್) ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಪರಿಷ್ಕೃತ ಯೋಜನೆಯಲ್ಲಿ ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್.ಪಿ.ಎಸ್.)ಗಳನ್ನು ಸಂಯೋಜಿಸಲಾಗಿದೆ. ಈಗಾಗಲೇ ಎನ್.ಪಿ.ಎಸ್.ನಲ್ಲಿ ದಾಖಲಾಗಿರುವ ಕೇಂದ್ರ ಸರ್ಕಾರಿ ನೌಕರರಿಗೆ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ.
ಕನಿಷ್ಠ 10 ವರ್ಷಗಳ ಕಾಲ ಅರ್ಹತಾ ಸೇವೆ ಪೂರ್ಣಗೊಳಿಸಿದವರು ಏಕೀಕೃತ ಪಿಂಚಣಿ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯಿಂದ ಸರ್ಕಾರ ಕೇಂದ್ರ ಸರ್ಕಾರಕ್ಕೆ 6250 ಕೋಟಿ ರೂಪಾಯಿ ಹೊರೆಯಾಗಲಿದೆ. ಕನಿಷ್ಠ 10 ವರ್ಷಗಳ ಸೇವೆ ನಂತರ ನಿವೃತ್ತಿಯಾಗುವ ಸರ್ಕಾರಿ ನೌಕರರಿಗೆ ತಿಂಗಳಿಗೆ 10,000 ರೂ. ಪಿಂಚಣಿಯ ಭರವಸೆ ನೀಡಲಾಗಿದೆ. ಕನಿಷ್ಠ 25 ವರ್ಷ ಕೆಲಸ ಮಾಡಿದವರಿಗೆ ಮೂಲ ವೇತನದ ಶೇಕಡ 50ರಷ್ಟು ಪಿಂಚಣಿಯಾಗಿ ಸಿಗಲಿದೆ. ಮೂಲವೇತನದ 12 ತಿಂಗಳ ಸರಾಸರಿ ಶೇಕಡ 50ರಷ್ಟು ಮೊತ್ತವನ್ನು ನಿವೃತ್ತ ನೌಕರರು ಪಿಂಚಣಿಯಾಗಿ ಪಡೆಯಲಿದ್ದಾರೆ,
ಪರಿಷ್ಕೃತ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು ಶೇಕಡ 18.5ರಷ್ಟು ಇದೆ. ಸದ್ಯ ಎನ್.ಪಿ.ಎಸ್.ನಲ್ಲಿ ಕೇಂದ್ರ ಸರ್ಕಾರದ ಕೊಡುಗೆ ಶೇಕಡ 14 ರಷ್ಟು, ನೌಕರರ ಕೊಡುಗೆ ಶೇಕಡ 10ರಷ್ಟು ಇದೆ. ಸೇವೆಯಲ್ಲಿರುವ ಉದ್ಯೋಗಿಗಳಿಗೆ ಸಾಮಾನ್ಯವಾಗಿ ಅನ್ವಯವಾಗುವ ತುಟ್ಟಿಭತ್ಯೆ ಪರಿಹಾರವನ್ನು ಯುಪಿಎಸ್ ಅಡಿಯಲ್ಲಿ ಖಾತರಿಪಡಿಸಿದ ಮತ್ತು ಕುಟುಂಬ ಪಾವತಿಗಳಿಗೆ ವಿಸ್ತರಿಸಲಾಗುವುದು. ಪಿಂಚಣಿದಾರರು ನಿಧನರಾದಾಗ ಶೇಕಡ 60ರಷ್ಟು ಪಿಂಚಣಿಯನ್ನು ಸಂಗಾತಿಗೆ ನೀಡಲಾಗುವುದು.