ಲಖ್ನೋ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಉತ್ತರಪ್ರದೇಶದ ಮಾಜಿ ಸಚಿವನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.
ಉತ್ತರ ಪ್ರದೇಶದ ಮಾಜಿ ಸಚಿವ ಮತ್ತು ಸಮಾಜವಾದಿ ಪಕ್ಷದ ಮುಖಂಡ ಗಾಯತ್ರಿ ಪ್ರಜಾಪತಿ ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಶಿಕ್ಷೆಯ ಜೊತೆಗೆ ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿ ಲಖ್ನೋ ವಿಶೇಷ ಕೋರ್ಟ್ ನಿಂದ ಜೈಲು ಶಿಕ್ಷೆ ಪ್ರಮಾಣ ಪ್ರಕಟಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಿಶೇಷ ಕೋರ್ಟ್ ಖುಲಾಸೆಗೊಳಿಸಿದೆ. ನವೆಂಬರ್ 10 ರಂದು ಇವರು ಅಪರಾಧಿಗಳೆಂದು ತೀರ್ಪು ನೀಡಿತ್ತು. ಗೌತಮಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, 2016 ರ ಜುಲೈನಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಳು.
ಚಿತ್ರಕೂಟ ಅತ್ಯಾಚಾರ ಪ್ರಕರಣವೆಂದು ಹೇಳಲಾಗಿದ್ದ ಈ ಪ್ರಕರಣದಲ್ಲಿ ಗಾಯತ್ರಿ ಪ್ರಸಾದ್ ಪ್ರಜಾಪತಿ ಮತ್ತು ಇತರ ಇಬ್ಬರಿಗೆ ಲಖ್ನೋದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಖಿಲೇಶ್ ಯಾದವ್ ಅವರ ಸಂಪುಟದದಲ್ಲಿ ಪ್ರಮುಖ ಸಾರಿಗೆ ಮತ್ತು ಗಣಿಗಾರಿಕೆ ಸಚಿವಾಲಯಗಳ ಖಾತೆಗಳನ್ನು ಹೊಂದಿದ್ದ ಪ್ರಜಾಪತಿಯನ್ನು ಮಾರ್ಚ್ 2017 ರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಆಕೆಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.
ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಸಚಿವರ ವಿರುದ್ಧ ಎಫ್‌ಐಆರ್ ಅನ್ನು ಗೌತಂಪಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು, ಫೆಬ್ರವರಿ 18, 2017 ರಂದು ಎಫ್‌ಐಆರ್ ದಾಖಲಾದ ನಂತರ ಸಚಿವರನ್ನು ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು.
ಅಕ್ಟೋಬರ್ 2014 ರಿಂದ ಸಚಿವರು ಮತ್ತು ಅವರ ಸಹಚರರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದು, ಜುಲೈ 2016 ರಲ್ಲಿ ತನ್ನ ಅಪ್ರಾಪ್ತ ಮಗಳಿಗೆ ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ ನಂತರ ಅವರ ವಿರುದ್ಧ ದೂರು ನೀಡಲು ನಿರ್ಧರಿಸಿದ್ದರು.
ಪ್ರಜಾಪತಿ ಜೊತೆಗೆ ಶಿಕ್ಷೆಗೆ ಗುರಿಯಾದ ಇನ್ನಿಬ್ಬರು ಆಶಿಶ್ ಶುಕ್ಲಾ ಮತ್ತು ಅಶೋಕ್ ತಿವಾರಿ. ಶುಕ್ಲಾ ಅಮೇಥಿಯಲ್ಲಿ ಮಾಜಿ ಕಂದಾಯ ಗುಮಾಸ್ತರಾಗಿದ್ದರೆ, ತಿವಾರಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ.