ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಪ್ರಿಯೋ ಮತ್ತು ಅಭಯ್ ನಿಮಗೆ ನೆನಪಿರಬಹುದು. ತೆಲಂಗಾಣದಲ್ಲಿ ವಿವಾಹವಾದ ಮೊದಲ ಸಲಿಂಗ ಜೋಡಿ ಎಂದು ಹೆಡ್ ಲೈನ್ಸ್ ಬರೆದದ್ದು ಇದೆ ಜೋಡಿ.
ಇವರಿಬ್ಬರ ಅದ್ಧೂರಿ ಮದುವೆ ಚಿತ್ರಗಳು ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದವು. ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಈ ಜೋಡಿ ಈಗ ತಮ್ಮ ಲವ್ ಸ್ಟೋರಿಯನ್ನ ಹಂಚಿಕೊಂಡಿದ್ದಾರೆ. ತಾವು ಭೇಟಿಯಾಗಿದ್ದಾಗಿನಿಂದ ಹಿಡಿದು, ಮದುವೆಯಾಗುವವರೆಗಿನ ಬಗ್ಗೆ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ.
ಹ್ಯೂಮನ್ಸ್ ಆಫ್ ಬಾಂಬೆ ಅವರ ಪೋಸ್ಟ್‌ನಲ್ಲಿ, ಸುಪ್ರಿಯೋ ಮತ್ತು ಅಭಯ್ ತಮ್ಮ ಪ್ರಯಾಣವನ್ನು ಹಂಚಿಕೊಂಡಿದ್ದಾರೆ. ಕಾಫಿ ಡೇಟ್ ನಿಂದ ಶುರುವಾದ ಇವರಿಬ್ಬರ ಪ್ರೀತಿ ಮದುವೆವರೆಗೆ ಬಂದು ತಲುಪಿದ್ದರವರೆಗಿನ ಪೂರ್ತಿ ಕಹಾನಿ ಹಂಚಿಕೊಂಡಿದ್ದಾರೆ.
ಸುಪ್ರಿಯೋ ಹಾಗೂ ಅಭಯ್ ಪ್ರೀತಿ ಶುರುವಾಗಿದ್ದು ಕಾಫಿಡೇಟ್ ನಿಂದ, ಮೊದಲ ಭೇಟಿಯಲ್ಲೆ ಇಬ್ಬರಿಗೂ ಪ್ರೀತಿಯಾಗಿತ್ತಾದರು ಹೇಳಿಕೊಳ್ಳುವುದು ಹೇಗೆ ಎಂಬ ಮುಜುಗರ ಇಬ್ಬರಲ್ಲು ಇತ್ತು. ಆಗ ಭಾರತದಲ್ಲಿ ಸಲಿಂಗ ಸಂಬಂಧವಾಗಲಿ, ವಿವಾಹವಾಗಲಿ ಕಾನೂನಿನ ಮಾನ್ಯತೆ ಪಡೆದಿರಲಿಲ್ಲ. ಆದರೂ ಇವರಿಬ್ಬರ ಪ್ರೀತಿ ಕೊನೆಗಾಣಲಿಲ್ಲ. ಪರಸ್ಪರ ಪ್ರೀತಿಗೆ ಬಿದ್ದ ಜೋಡಿ, ಪೋಷಕರನ್ನು ಒಪ್ಪಿಸಲು ಮುಂದಾದರು.
ಮೊದಲು ಅಭಯ್ ನನ್ನನ್ನ ಆತನ ಪೋಷಕರಿಗೆ ಪರಿಚಯಿಸಿ ನಮ್ಮ ಬಗ್ಗೆ ಹೇಳಿದ್ದನು, ಅವರು ನಮಗೆ ಆಶೀರ್ವದಿಸಿದ್ದರು. ಈ ಘಟನೆ ನನ್ನಲ್ಲೂ ನನ್ನ ಮತ್ತು ಅಭಯ್ ಪ್ರೀತಿಯ ಬಗ್ಗೆ ನನ್ನ ತಂದೆತಾಯಿಗೆ ಹೇಳಬೇಕು ಎಂಬ ಆಸೆ ಹುಟ್ಟುಹಾಕಿತ್ತು. ಆದರೆ ನನ್ನ ಪರಿಸ್ಥಿತಿ ವಿಭಿನ್ನ. ನನ್ನ ಬಗ್ಗೆ ನಮ್ಮ ಕುಟುಂಬದವರಿಗೆ ತಿಳಿದಿರಲಿಲ್ಲ. ಆದರೂ ಧೈರ್ಯ ವಹಿಸಿ ನನ್ನ ತಾಯಿಯ ಬಳಿ ಈ ಬಗ್ಗೆ ಹೇಳಿದಾಗ ಒಂದು ಕ್ಷಣ ಅವರು ಮಂಕಾದರು, ಆದರೆ ಅವರಿಗೆ ನನ್ನ ಖುಷಿಯಷ್ಟೆ ಮುಖ್ಯ ಹಾಗಾಗಿ ನನ್ನನ್ನು ನಾನಿರುವ ಹಾಗೇ ಒಪ್ಪಿಕೊಂಡರು.
ಅಮ್ಮನ ಸಹಾಯದಿಂದಲೆ ನಾನು ಅಪ್ಪ ಹಾಗೂ ನನ್ನ ಸಹೋದರಿಗೆ ಈ ವಿಷಯ ತಿಳಿಸಿದೆ, ಅವರು ನನ್ನನ್ನು ಅರ್ಥ ಮಾಡಿಕೊಂಡರು. ಎಲ್ಲರ ಅಸ್ತು ಸಿಕ್ಕಮೇಲೆ ಅಭಯ್ ನನ್ನ ಗಂಡನಾಗಿದ್ದಾನೆ, ಈಗ ನಾವಿಬ್ಬರು ಒಂದೇ ಮನೆಯಲ್ಲಿದ್ದೀವಿ. ನಮ್ಮ ಪ್ರೀತಿ ಗೆದ್ದಿದೆ ಎಂದು ಸುಪ್ರಿಯೋ ಭಾವುಕರಾಗಿದ್ದಾರೆ. ಇವರಿಬ್ಬರ ಪ್ರೀತಿಗೆ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.