ಬೆಂಗಳೂರು: ಮಕರ ಸಂಕ್ರಮಣದ ದಿನದಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆಯುವ ಸೂರ್ಯ ಕಿರಣ ಶಿವಲಿಂಗ ಸ್ಪರ್ಶಿಸುವ ಕೌತುಕ ಈ ಬಾರಿ ಸಂಭವಿಸದಿರುವುದು ಭಕ್ತರಿಗೆ ನಿರಾಸೆಯನ್ನುಂಟುಮಾಡಿದೆ.
ಬೆಂಗಳೂರಿನ ಗವೀಪುರಂನಲ್ಲಿರುವ ಐತಿಹಾಸಿಕ, ವಾಸ್ತುಶಾಸ್ತ್ರ ಪ್ರಸಿದ್ಧ ದೇವಾಲಯ ಗವಿಗಂಗಾದ್ಧರೇಶ್ವರ ದೇವಸ್ಥಾನದಲ್ಲಿ ಪ್ರತಿಬಾರಿಯ ಸಂಕ್ರಾಂತಿಯಂತೆ ಈಬಾರಿ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿಲ್ಲ. ಸೂರ್ಯದೇವ ಈಶ್ವರನಿಗೆ ನಮಸ್ಕರಿಸುವ ವಿಸ್ಮಯಕಾರಿ ಕ್ಷಣಗಳನ್ನು ಕಣ್ತುಂಬಿಕೊಳ್ಳಲೆಂದು ಬಂದ ಸಾವಿರಾರು ಭಕ್ತರಿಗೆ ನಿರಾಸೆಯಾಗಿದೆ.
ಸಂಕ್ರಾಂತಿ ದಿನದಂದು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಸೂರ್ಯದೇವ ಗವಿಗಂಗಾಧರನಿಗೆ ನಮಿಸಿ, ಪೂಜೆ ಸಲ್ಲಿಸುವ ಮೂಲಕ ತನ್ನ ಪಥ ಬದಲಿಸುತ್ತಾನೆ ಎಂಬುದು ನಂಬಿಕೆ. ಅದರಂತೆ ಪ್ರತಿ ಸಂಕ್ರಾಂತಿಯಂದು ಸಂಜೆ 5:14ರಿಂದ 5:17ರ ಸಮಯದಲ್ಲಿ ಸೂರ್ಯನ ಕಿರಣಗಳು ದೇವಸ್ಥಾನದ ನಂದಿ ವಿಗ್ರಹದ ಮೂಲಕ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಪಾರ್ವತಿ ದೇವಿಯ ಚರಣಾರವಿಂದಗಳನ್ನು ಸ್ಪರ್ಶಿಸಿ ಬಳಿಕ ಶಿವಲಿಂಗವನ್ನು ಸ್ಪರ್ಶಿಸುತ್ತಿದ್ದವು. ಆದರೆ ಈ ಬಾರಿ ಸಂಕ್ರಾಂತಿಯಂದು ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಹಿನ್ನೆಲೆಯಲ್ಲಿ ಈ ಕೌತುಕ ನಡೆದಿಲ್ಲ. ಮೋಡ ಮುಸಿಕಿರುವ ವಾತಾವರಣದಿಂದಾಗಿ ಸೂರ್ಯ ಕಿರಣಗಳ ಗೋಚರತೆ ಕಂಡುಬಂದಿಲ್ಲ
ಇನ್ನು ಗವಿಗಂಗಾಧರನಿಗೆ ಸಂಕ್ರಮಣದ ದಿನದಂದು ಸೂರ್ಯನ ಕಿರಣಗಳು ಸ್ಪರ್ಶಿಸದಿರುವುದು ಇದು ಮೊದಲಲ್ಲ. ಈ ಹಿಂದೆ ಎರಡು ಬಾರಿ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿರಲಿಲ್ಲ. ಇದೀಗ ಈ ಬಾರಿ ಕೂಡ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸದಿರುವುದು ಸಹಜವಾಗಿಯೇ ನಿರಾಸೆಯನ್ನುಂಟುಮಾಡಿದೆ.