ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಇಂದು ಬೆಳಕಿನ ವಿಸ್ಮಯವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.
ಗವಿ ಗಂಗಾಧರನಿಗೆ ನಮಿಸಿ ಸೂರ್ಯ ಪಥ ಬದಲಿಸಿದ್ದಾನೆ. ಪಥ ಬದಲಾವಣೆಗೆ ಮುನ್ನ ಸಂಜೆ 5:20ರ ಸುಮಾರಿಗೆ ಗವಿ ಗಂಗಾಧರೇಶ್ವರ ಸ್ವಾಮಿಗೆ ಸೂರ್ಯನ ಸ್ಪರ್ಶವಾಗಿದೆ. ಭಾಸ್ಕರನ ಕಿರಣಗಳಲ್ಲಿ ಶಿವಲಿಂಗ ಕಂಗೊಳಿಸಿದೆ.
ಮಕರ ಸಂಕ್ರಾಂತಿಯಂದು ಸೂರ್ಯ ಪಥ ಬದಲಿಸಲಿದ್ದು, ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಗವಿಗಂಗಾಧರೇಶ್ವರನನ್ನ ಸ್ಪರ್ಶಿಸುತ್ತವೆ. ಪ್ರತಿ ವರ್ಷ ನಡೆಯುವ ಈ ಕೌತುಕ, ಬೆಳಕಿನ ವಿಸ್ಮಯವನ್ನು ನೋಡಲು ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ದೇವಾಲಯವನ್ನು ಪ್ರವೇಶಿಸಿದ ಸೂರ್ಯರಶ್ಮಿ ಪ್ರವೇಶ ದ್ವಾರದ ಎರಡು ಕಿಟಕಿ ಮೂಲಕ ನಂದಿಯನ್ನು ಹಾದು ಶಿವಲಿಂಗವನ್ನು ಸ್ಪರ್ಶಿಸಿದೆ. ಇದೇ ವೇಳೆ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕ ನೆರವೇರಿಸಲಾಗಿದೆ.
ಸೂರ್ಯ ರಶ್ಮಿ ಸ್ಪರ್ಶದ ವೇಳೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಭಕ್ತರಿಗೆ ಹೊರಗೆ ಸೂರ್ಯ ರಶ್ಮಿ ವೀಕ್ಷಿಸಲು ದೇವಾಲಯ ಆಡಳಿತ ಮಂಡಳಿಯಿಂದ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ಸೂರ್ಯ ರಶ್ಮಿ ಸ್ಪರ್ಶಿಸಿದ ನಂತರ ದೇವರಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.