ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ದಿನದಂದು ಸೂರ್ಯನ ಕಿರಣಗಳು ಗವಿಗಂಗಾಧರೇಶ್ವರನನ್ನ ಸ್ಪರ್ಶಿಸುತ್ತವೆ. ಈ ಬಾರಿ ಮೋಡ ಕವಿದ ವಾತಾವರಣವಿದ್ದ ಕಾರಣ ನೇರವಾಗಿ ಸ್ಪರ್ಶಿಸಿಲ್ಲ.
ಸೂರ್ಯನ ಪೂಜೆ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ. ಪ್ರಕೃತಿ, ದೈವ ನಿರ್ಣಯದಂತೆ ಈ ರೀತಿ ಆಗಿದೆ. ನನ್ನ 53 ವರ್ಷದ ಸೇವೆಯಲ್ಲಿ ಈ ಬಾರಿ ಸೂರ್ಯ ನೇರವಾಗಿ ಸ್ಪರ್ಶಿಸಿಲ್ಲ. ಅಭಿಷೇಕದ ವೇಳೆ ಸೂರ್ಯನ ಛಾಯೆ ಹಾದು ಹೋಗಿದೆ ಎಂದು ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಅವರು ಹೇಳಿದ್ದಾರೆ.
ಯಾವ ವರ್ಷವೂ ಕಾಣದ ಅಗೋಚರ ಪೂಜೆ ಈ ಸಲ ಆಗಿದೆ. ಸೂರ್ಯ ವಿಶ್ವಕ್ಕೆ ಒಳ್ಳೆಯದನ್ನು ಮಾಡಲಿ. ಸೂರ್ಯನ ರಶ್ಮಿ ಲಿಂಗದ ಮೇಲೆ ಅಗೋಚರವಾಗಿ ಸ್ಪರ್ಶವಾಗಿದೆ. ಲಿಂಗದ ಮೇಲೆ ಕ್ಷೀರಾಭಿಷೇಕದ ಸಂದರ್ಭದಲ್ಲಿ ಸೂರ್ಯನ ಛಾಯೆ ಕಂಡು ಬಂದಿದೆ ಎಂದು ಹೇಳಿದ್ದಾರೆ.
ಸೂರ್ಯ ರಶ್ಮಿ ನಂದಿಯನ್ನು ಹಾದು ಗರ್ಭಗೃಹದವರೆಗೂ ತಲುಪಿ ಕೆಳಗಿನ ಲಿಂಗಕ್ಕೆ ಸ್ಪರ್ಶಿಸಿದೆ. ದೇವರ ಅನುಗ್ರಹದಿಂದ ಎಲ್ಲರಿಗೂ ಒಳ್ಳೆಯದಾಗಲಿ. ಉತ್ತರಾಯಣ ಕಾಲದಲ್ಲಿ ಕಷ್ಟಗಳು ದೂರವಾಗಲಿ ಎಂದು ಆಶಿಸಿದ್ದಾರೆ.