ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಇಂದು ಬೆಳಕಿನ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ.
ಮಕರಸಂಕ್ರಾಂತಿಯಂದು ಸೂರ್ಯಪಥ ಬದಲಿಸಲಿದ್ದು, ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಗವಿಗಂಗಾಧರೇಶ್ವರನನ್ನ ಸ್ಪರ್ಶಿಸುತ್ತವೆ. ಪ್ರತಿ ವರ್ಷ ನಡೆಯುವ ಈ ಕೌತುಕ, ಬೆಳಕಿನ ವಿಸ್ಮಯವನ್ನು ನೋಡಲು ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ದೇವಾಲಯವನ್ನು ಪ್ರವೇಶಿಸಿದ ಸೂರ್ಯರಶ್ಮಿ ಪ್ರವೇಶ ದ್ವಾರದ ಎರಡು ಕಿಟಕಿ ಮೂಲಕ ನಂದಿಯನ್ನು ಹಾದು ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಇದೇ ವೇಳೆ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕ ನೆರವೇರಿಸಲಾಗುತ್ತದೆ.
ಆದರೆ, ಸಂಜೆ 5.27 ರ ವೇಳೆಗೆ ಸೂರ್ಯನಿಗೆ ಮೋಡ ಅಡ್ಡ ಬಂದ ಕಾರಣ ಸೂರ್ಯ ರಶ್ಮಿ ಗಂಗಾಧರೇಶ್ವರನವರೆಗೂ ತಲುಪಲಿಲ್ಲ. ನಂದಿಯವರೆಗೂ ಮಾತ್ರ ರಶ್ಮಿ ಬಂದಿದೆ. ಇದರಿಂದಾಗಿ ಅಪಾರ ಸಂಖ್ಯೆಯ ಭಕ್ತರಿಗೆ ನಿರಾಸೆಯಾಗಿದೆ. ಸೂರ್ಯನಿಗೆ ಮೋಡ ಅಡ್ಡಿ ಬಂದ ಕಾರಣ ಅಗೋಚರವಾಗಿ ಸೂರ್ಯ ರಶ್ಮಿಯ ಸ್ಪರ್ಶವಾಗಿದೆ ಎನ್ನಲಾಗಿದೆ.
ಮಕರ ಸಂಕ್ರಾಂತಿ ದಿನದಂದು ಸೂರ್ಯಪಥ ಬದಲಿಸುತ್ತಾನೆ. ಸೂರ್ಯನ ಕಿರಣಗಳು ಈ ದಿನದಂದು ಗವಿಗಂಗಾಧರೇಶ್ವರನನ್ನ ಸ್ಪರ್ಶಿಸುತ್ತವೆ. ಈ ಬಾರಿ ಮೋಡ ಕವಿದ ವಾತಾವರಣವಿದ್ದ ಕಾರಣ ನೇರವಾಗಿ ಸ್ಪರ್ಶಿಸಿಲ್ಲವೆನ್ನಲಾಗಿದೆ.