ಬೆಂಗಳೂರು: ಮಕರ ಸಂಕ್ರಮಣದ ದಿನ ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯ ದೇವ ಶಿವಲಿಂಗವನ್ನು ಸ್ಪರ್ಶಿಸಿ ನಮಸ್ಕರಿಸಿದ್ದು, ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಂಡ ಭಕ್ತರು ಪುನೀತರಾದರು.
ಮಕರ ಸಂಕ್ರಾಂತಿಯಂದು ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಸಂದರ್ಭದಲ್ಲಿ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಚಮತ್ಕಾರವೊಂದು ನಡೆಯುತ್ತದೆ. ಅದೇರೀತಿ ಈ ಬಾರಿ ಕೂಡ ಸಾವಿರಾರು ಭಕ್ತರು ಈ ಕೌತುಕಕ್ಕೆ ಸಾಕ್ಷಿಯಾದರು. ಸಂಜೆ 5.15ರಿಂದ 5:30ರ ಸಮಯದಲ್ಲಿ ಸೂರ್ಯ ರಶ್ಮಿ ಗವಿಗಂಗಾಧರೇಶ್ವರನ ಪಾದಸ್ಪರ್ಶ ಮಾಡುವ ಮೂಲಕ ವಿಸ್ಮಯಕ್ಕೆ ಕಾರಣವಾಯಿತು.
ನಂದಿ ವಿಗ್ರಹದ ಮೂಲಕವಾಗಿ ಶಿವಲಿಂಗದ ಗರ್ಭಗುಡಿಯ ಕತ್ತಲನ್ನು ಸೀಳಿಕೊಂಡು ಬಂದ ಸೂರ್ಯನ ಕಿರಣಗಳು ಶಿವಲಿಂಗ ಪಾದ ಸ್ಪರ್ಶಿಸಿಸಿ ಬಳಿಕ ಶಿವನ ಶಿಖರವನ್ನು ಸ್ಪರ್ಶಿಸಿ ಮರೆಯಾಯಿತು. ಈ ಅಧ್ಭುತ ಕ್ಷಣಗಳನ್ನು ನೆರೆದಿದ್ದ ಭಕ್ತರು ಭಕ್ತಿಯಿಂದ ಕಣ್ತುಂಬಿಕೊಂಡರು.