ಬೆಂಗಳೂರು: ಗವಿಗಂಗಾಧರೇಶ್ವರ ದೇಗುಲದಲ್ಲಿ ಸೂರ್ಯರಶ್ಮಿ ಸ್ಪರ್ಶವಾಗಿದ್ದು, ಈ ಬಾರಿ ನೇರವಾಗಿ ಪ್ರಕೃತಿ ವಿಸ್ಮಯ ಕಣ್ತುಂಬಿಕೊಳ್ಳಲು ಭಕ್ತರಿಗೆ ಅವಕಾಶ ಸಿಕ್ಕಿಲ್ಲ.
ಬೆಂಗಳೂರಿನ ಗವಿಪುರಂನಲ್ಲಿರುವ ಐತಿಹಾಸಿಕ ಗವಿಗಂಗಾಧರೇಶ್ವರ ದೇವಾಲಯದಲ್ಲಿ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸಿದ ಸೂರ್ಯ ಗವಿಗಂಗಾಧರೇಶ್ವರನ ಸ್ಪರ್ಶಿಸಿದ್ದಾನೆ. ಲಿಂಗದ ಮುಂದಿರುವ ನಂದಿಯ ಕೊಂಬಿನಿಂದ ಹಾದು ಸೂರ್ಯರಶ್ಮಿ ಶಿವನಿಗೆ ಸ್ಪರ್ಶಿಸಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಗಿದೆ.
ಸಂಜೆ 5.14 ರಿಂದ 5.17 ರ ನಡುವೆ ಸೂರ್ಯರಶ್ಮಿ ಸ್ಪರ್ಶವಾಗಿದೆ. ಈಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶದ ನಂತರ ಶಿವನಿಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಗಿದೆ. ಸೂರ್ಯರಶ್ಮಿ ಶಿವಲಿಂಗಕ್ಕೆ ಸ್ಪರ್ಶಿಸುವ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಸೋಂಕು ಇರುವುದರಿಂದ ದೇವಾಲಯಕ್ಕೆ ಪ್ರವೇಶ ನೀಡಲಾಗಿಲ್ಲ.
ಜನವರಿ 15 ರಂದು ಮಕರ ಸಂಕ್ರಾಂತಿ ಹಬ್ಬ ಆಚರಿಸಲಾಗುವುದು. ಪಂಚಾಂಗದ ಪ್ರಕಾರ ಒಂದು ದಿನ ಮೊದಲೇ ಇಂದು ಸೂರ್ಯರಶ್ಮಿ ಗವಿಗಂಗಾಧರೇಶ್ವರನ ಸ್ಪರ್ಶಿಸಿದೆ. ಕಳೆದ ಬಾರಿ ಸೂರ್ಯರಶ್ಮಿ ಗವಿಗಂಗಾಧರೇಶ್ವರನ ಸ್ಪರ್ಶಿಸದ ಕಾರಣ ಭಕ್ತರಿಗೆ ನಿರಾಸೆಯಾಗಿತ್ತು.