ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯ 45ನೇ ಪಂದ್ಯವಾಗಿ ಪಂಜಾಬ್ ಕಿಂಗ್ಸ್(ಪಿಬಿಕೆಎಸ್) ಮತ್ತು ಕೋಲ್ಕೊತಾ ನೈಟ್ ರೈಡರ್ಸ್(ಕೆಕೆಆರ್) ನಡುವೆ ಭಾರಿ ಹಣಾಹಣಿ ನಡೆಯುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್‌ಗಳನ್ನು ಕಲೆಹಾಕಿತ್ತು.
ಇದನ್ನು ಬೆನ್ನತ್ತಿದ ಪಂಜಾಬ್ ತಂಡಕ್ಕೆ ಆಸರೆಯಾಗಿ ನಿಂತಿದ್ದು ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್. ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದ ರಾಹುಲ್ ರನ್ನು ಕಟ್ಟಿಹಾಕಲು ಬೌಲರ್‌ಗಳು ಬಹಳ ಯತ್ನಿಸಿದರೂ ಕೂಡ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಸ್ಕೋರ್‌ಬೋರ್ಡ್ ಹೆಚ್ಚುತ್ತಲೇ ಇತ್ತು. ಗೆಲ್ಲುವ ಹಂತದ ಸಮೀಪಕ್ಕೆ ಪಂಜಾಬ್ ಕಿಂಗ್ಸ್ ತಲುಪುತ್ತಿದ್ದರು.
9 ಬಾಲ್‌ಗಳಿಗೆ 11 ರನ್‌ಗಳ ಅವಶ್ಯಕತೆ ಇದ್ದಾಗ ನಿರ್ಣಾಯಕ ಹಂತಕ್ಕೆ ಪಂದ್ಯವು ತಲುಪಿದ್ದ ವೇಳೆಯಲ್ಲಿ ರಾಹುಲ್ ಅವರು ಶಾರ್ಟ್ ಬಾಲ್‌ವೊಂದನ್ನು ಮಿಡ್ ವಿಕೆಟ್ ಬೌಂಡರಿ ಕಡೆಗೆ ಎತ್ತಿ ಬಾರಿಸಿದರು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಹುಲ್ ತ್ರಿಪಾಠಿ ಅವರು ಡೈವ್ ಹಾರಿಕೊಂಡು ಕ್ಯಾಚ್ ಕೂಡ ಹಿಡಿದರು. ಈ ವೇಳೆ, ಅವರು ಸಂಭ್ರಮಾಚರಣೆಯಲ್ಲಿ ಕೂಡ ತೊಡಗಿದರು.
ಆದರೆ, ಅಂಪೈರ್‌ಗಳು ’ಔಟ್’ ಕೊಡಲು ತಯಾರಿಲ್ಲದೆಯೇ ಥರ್ಡ್ ಅಂಪೈರ್ ಕಡೆಗೆ ಬೆರಳು ಮಾಡಿದರು. ಹಲವು ಸುತ್ತಿನ ವಿಡಿಯೊ ವೀಕ್ಷಣೆ ಬಳಿಕ ಥರ್ಡ್ ಅಂಪೈರ್ ’ನಾಟ್ ಔಟ್’ ಎಂದು ತೀರ್ಪು ಪ್ರಕಟಿಸಿದರು.
ಇದನ್ನು ಕಂಡಕೂಡಲೇ ಕಾಮೆಂಟರಿ ಮಾಡುತ್ತಿದ್ದ ಕೆಕೆಆರ್ ತಂಡದ ಮಾಜಿ ಕ್ಯಾಪ್ಟನ್ ಗೌತಮ್ ಗಂಭೀರ್ ಅವರು ಆಕ್ರೋಶದಿಂದ ’ಇದು ಕಳಪೆ ಥರ್ಡ್ ಅಂಪೈರಿಂಗ್, ಇಂಥ ಕೆಟ್ಟ ನಿರ್ಣಯ ನೋಡೇ ಇಲ್ಲ. ರಾಹುಲ್ ಔಟ್ ಆಗಿದ್ದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು ,’ ಎಂದರು. ಮತ್ತೊಬ್ಬ ಕಮೆಂಟೇಟರ್ ಸ್ವಾನ್ ಕೂಡ ಗಂಭೀರ್‌ಗೆ ಸಾಥ್ ನೀಡಿದರು.
ಪಂದ್ಯ ಮುಗಿದ ಬಳಿಕ ಕೆಕೆಆರ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಕೂಡ ಕ್ಯಾಚ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, ಥರ್ಡ್ ಅಂಪೈರ್ ಅದೇನು ನೋಡಿದರೋ ಗೊತ್ತಿಲ್ಲ ಎಂದರು. 55 ಬಾಲ್‌ಗಳಿಗೆ ಒಟ್ಟು 67 ರನ್ ಬಾರಿಸಿದ ಕೆ.ಎಲ್. ರಾಹುಲ್ ತಮ್ಮ ತಂಡಕ್ಕೆ ವಿಜಯದ ಮಾಲೆ ಹಾಕಿಸಿದರು.