ಐಸಿಸ್ ಕಾಶ್ಮೀರದಿಂದ ತನಗೆ ಜೀವ ಬೆದರಿಕೆ ಬಂದಿದೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ಹಾಗೂ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಂಗಳವಾರ ರಾತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಗೌತಮ್ ಗಂಭೀರ್ ಪ್ರಕರಣ ದಾಖಲಿಸಿರುವ ವಿಚಾರವಾಗಿ ಮಾತನಾಡಿದ ಡಿಸಿಪಿ ಶ್ವೇತಾ ಚೌಹಾಣ್, ದೂರು ದಾಖಲಿಸಿಕೊಳ್ಳಲಾಗಿದ್ದು ಪೊಲೀಸರು ಈ ವಿಚಾರವಾಗಿ ತನಿಖೆ ಚುರುಕುಗೊಳಿಸಿದ್ದಾರೆ ಎಂದು ಹೇಳಿದ್ರು. ಇತ್ತ ರಾಜೇಂದ್ರ ನಗರದಲ್ಲಿರುವ ಗೌತಮ್ ಗಂಭೀರ್ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇಮೇಲ್ ಮೂಲಕ ರಾಜಕಾರಣಿ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ಗೆ ಬೆದರಿಕೆ ಒಡ್ಡಲಾಗಿದೆ. ಈ ಬೆದರಿಕೆಯನ್ನು ಐಸಿಸ್ನವರೇ ಹಾಕಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಗಂಭೀರ್ ಬೆದರಿಕೆ ಪತ್ರ ಕಳುಹಿಸಿದ ಇಮೇಲ್ ವಿಳಾಸವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಟಿಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಿಜೆಪಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ವರ್ಷಗಳ ಕಾಲ ಟೀಂ ಇಂಡಿಯಾ ಸದಸ್ಯನಾಗಿ ಆಡಿದ್ದಾರೆ. 2018ರಲ್ಲಿ ಗಂಭೀರ್ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದರು.