ನ್ಯೂಯಾರ್ಕ್: ಲಂಚ ಪಾವತಿ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾದ ನ್ಯಾಯಾಲಯ ಉದ್ಯಮಿ ಗೌತಮ್ ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ.
ಸೌರವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಮಾಡಿರುವ ಆರೋಪ ಉದ್ಯಮಿ ಗೌತಮ್ ಅದಾನಿ ವಿರುದ್ಧ ಕೇಳಿಬಂದಿದೆ.
2,237 ಕೋಟಿ ಲಂಚದ ಆರೋಪದಲ್ಲಿ ಗೌತಮ್ ಅದಾನಿ, ಸಾಗರ್ ಆರ್. ಅದಾನಿ ಹಾಗೂ ವಿನೀತ್ ಎಸ್. ಜೈನ್ ವಿರುದ್ಧ 5 ಅಂಶಗಳ ಕ್ರಿಮಿನಲ್ ಆರೋಪಪಟ್ಟಿಯನ್ನು ನ್ಯೂಯಾರ್ಕ್ ನ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ಅಮೆರಿಕದ ಪ್ರಾಸಿಕ್ಯೂಟರ್ ಸಲ್ಲಿಸಿದ್ದಾರೆ. ಭಾರತದಲ್ಲಿ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಆಕರ್ಷಿಸಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಹಾಗೂ ಅಮೆರಿಕ ಒಳಗೊಂಡತೆ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಹಿತಿ ನೀಡಿದ ಆರೋಪ ಇವರ ಮೇಲಿದೆ.
ಕೋರ್ಟ್ ಆದೇಶದ ಬೆನ್ನಲ್ಲೇ 5 ಸಾವಿರ ಕೋಟಿ ಸಂಗ್ರಹಿಸುವ ಬಾಂಡ್ ಬಿಡುಗಡೆ ಮಡುವ ಪ್ರಸ್ತಾಪವನೆಯಿಂದ ಅದಾನಿ ಗ್ರೀನ್ ಕಂಪನಿ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ವ್ಯವಹಾರ ನಡೆಸಿದ್ದ ಕಂಪನಿಯ ಮಾಜಿ ಅಧಿಕಾರಿಗಳಾದ ರಂಜಿತ್ ಗುಪ್ತಾ ಹಾಗೂ ರೂಪೇಶ್ ಅಗರ್ ವಾಲ್ ಹಾಗೂ ಕೆನಡಾ ಮೂಲದ ಹೂಡಿಕೆದಾರರಾದ ದೀಪಕ್ ಮಲ್ಹೋತ್ರಾ ಮತ್ತು ಸೌರಬ್ ಅಗರವಾಲ್ ಲಂಚ ನೀಡಿರುವುದು ವಿದೇಶಿ ಭ್ರಷ್ಟ ಕಾರ್ಯಾಚರಣೆ ಕಾಯ್ದೆಯಡಿ ಅಪರಾಧವಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಅದಾನಿ ಹಾಗೂ ಇತರ ಆರೋಪಿಗಳು ಲಂಚ ಹಾಗೂ ಭ್ರಷ್ಟಾಚಾರದ ಬಗ್ಗೆ ಸುಳ್ಳು ಹೇಳಿಕೆಗಳ ಮೂಲಕ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೇ ತನಿಖೆಗೆ ಅಡ್ಡಿಪಡಿಸುವ ಮೂಲಕ ಲಂಚದ ಆರೋಪ ಮರೆಮಾಚಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.