![](https://kannadadunia.com/wp-content/uploads/2021/12/adani-mamata.jpg)
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಅದಾನಿ ಗ್ರೂಪ್ ಸಂಸ್ಥಾಪಕ ಹಾಗೂ ಚೇರ್ಮನ್ ಗೌತಮ್ ಅದಾನಿಯೊಂದಿಗೆ ರಾಜ್ಯ ಸಚಿವಾಲಯದ ನಬನ್ನಾದಲ್ಲಿ ಮಹತ್ವದ ಮಾತುಕತೆ ನಡೆಸಿದರು.
ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಬಳಿಕ ಗೌತಮ್ ಅದಾನಿ ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿಯಾಗಿದ್ದರಿಂದ ಸಂತೋಷವಾಗಿದೆ ಎಂದು ಟ್ವೀಟಾಯಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹೂಡಿಕೆ ಹಾಗೂ ಸಾಮರ್ಥ್ಯಗಳ ಬಗ್ಗೆ ಚರ್ಚೆ ನಡೆಸಲಾಯ್ತು. 2022ರ ಏಪ್ರಿಲ್ನಲ್ಲಿ ಬಂಗಾಳ ಬಿಸಿನೆಸ್ ಶೃಂಗಸಭೆಯಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ನಬನ್ನಾದಿಂದ ಬಂದಿರುವ ಮಾಹಿತಿಯ ಪ್ರಕಾರ ಅದಾನಿ ಹಾಗೂ ಮಮತಾ ಒಂದೂವರೆ ಗಂಟೆಗೂ ಹೆಚ್ಚು ಕಾಲ ಪರಸ್ಪರ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮುಂಬೈನಿಂದ ವಾಪಸ್ಸಾದ ಕೆಲವೇ ಗಂಟೆಗಳಲ್ಲಿ ಮಮತಾ ಬ್ಯಾನರ್ಜಿ ಅದಾನಿಯನ್ನು ಭೇಟಿಯಾಗಲು ನಬನ್ನಾಗೆ ತೆರಳಿದ್ದರು.
ಈ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ಹಾಜರಿದ್ದರು ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.