ಇದೇ ಜುಲೈ 26ರ ಶುಕ್ರವಾರದಂದು 5g ಸೇವೆಗಳನ್ನು ಒದಗಿಸುವ ಸ್ಪೆಕ್ಟ್ರಮ್ ಹರಾಜು ಮಾಡಲಾಗುತ್ತಿದ್ದು, ಇದರಲ್ಲಿ ದೇಶದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಪಾಲ್ಗೊಳ್ಳುವುದು ಖಚಿತವಾಗಿತ್ತು. ಆದರೆ ಮತ್ತೊಂದು ಕಂಪನಿಯ ಅರ್ಜಿಯು ಸಲ್ಲಿಕೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ದೇಶದ ಅತ್ಯಂತ ಸಿರಿವಂತ ವ್ಯಕ್ತಿಗಳ ಪೈಕಿ ಒಬ್ಬರಾದ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಸಹ 5g ಸ್ಪೆಕ್ಟ್ರಮ್ ಹರಾಜಿನಲ್ಲಿ ಭಾಗವಹಿಸುತ್ತಿದೆ ಎಂದು ತಿಳಿದುಬಂದಿದೆ. ಈ ಟೆಲಿಕಾಂ ಹರಾಜಿನಲ್ಲಿ ನಾಲ್ಕು ದಿಗ್ಗಜ ಕಂಪನಿಗಳು ಪಾಲ್ಗೊಳ್ಳುತ್ತಿರುವ ಕಾರಣ ಉದ್ಯಮ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಈ ಹಿಂದೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್, ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ಸಂದರ್ಭದಲ್ಲಿ ದೊಡ್ಡಮಟ್ಟದ ದರ ಸಮರ ಆರಂಭವಾಗಿದ್ದು, ಇದು ಗ್ರಾಹಕರಿಗೆ ಅನುಕೂಲವನ್ನು ಒದಗಿಸಿತ್ತು. ಇದೀಗ ಅದಾನಿ ಗ್ರೂಪ್ ಸಹ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡಲು ಮುಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ದರ ಸಮರ ನಡೆಯಲಿದೆಯಾ ಎಂಬ ಪ್ರಶ್ನೆ ಮೂಡಿದೆ.