ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ನಿವ್ವಳ ಮೌಲ್ಯವು ಈ ವರ್ಷದ ಜನವರಿ ಮತ್ತು ಜೂನ್ ನಡುವೆ ಕುಸಿದಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಕಳೆದ ಆರು ತಿಂಗಳಲ್ಲಿ 60.2 ಶತಕೋಟಿ (₹4 ಲಕ್ಷ ಕೋಟಿಗೂ ಹೆಚ್ಚು) ಕಳೆದುಕೊಂಡಿದ್ದಾರೆ.
ಜನವರಿ 27ರಂದು ಹಿಂಡೆನ್ಬರ್ಗ್ ರಿಸರ್ಚ್ ತನ್ನ ವರದಿಯಲ್ಲಿ ಅದಾನಿ ಗ್ರೂಪ್ ಲೆಕ್ಕಪತ್ರ ವಂಚನೆ ಹಾಗೂ ಸ್ಟಾಕ್ ಮ್ಯಾನಿಪುಲೇಶನ್ ಮಾಡಿದೆ ಎಂದು ಆರೋಪಿಸಿದ ದಿನದಂದು ಅತೀ ಹೆಚ್ಚು ಎಂದರೆ 20.8 ಶತಕೋಟಿ ಡಾಲರ್ ಕಳೆದುಕೊಳ್ಳುವ ಮೂಲಕ ಒಂದೇ ದಿನದಲ್ಲಿ ಅತೀ ಹೆಚ್ಚು ನಷ್ಟ ಕಂಡ ಕೋಟ್ಯಾಧಿಪತಿ ಎಂಬ ದಾಖಲೆ ಬರೆದಿದ್ದಾರೆ. ಆದರೆ ಅಮೆರಿಕದ ಸಂಶೋಧನಾ ಸಂಸ್ಥೆ ಮಾಡಿರುವ ಈ ಎಲ್ಲಾ ಆರೋಪಗಳನ್ನು ಅದಾನಿ ಅಲ್ಲಗಳೆದಿದ್ದಾರೆ.
ಮೇ ತಿಂಗಳಲ್ಲಿ ಸೆಕ್ಯೂರಿಟೀಸ್ & ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ ನಿಯಂತ್ರಣ ವೈಫಲ್ಯ ಮತ್ತು ಅದಾನಿ ಗ್ರೂಪ್ ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ ಪರಿಣಿತ ಸಮಿತಿಯು ಅದಾನಿಯ ಮೇಲೆ ಇರುವ ಷೇರು ಬೆಲೆ ಬದಲಾವಣೆ ಹಾಗೂ ನಿಯಮಗಳ ಉಲ್ಲಂಘನೆ ಆರೋಪಗಳನ್ನು ಈ ಹಂತದಲ್ಲಿ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಜೂನ್ 27 ರಂದು, ಗೌತಮ್ ಅದಾನಿ ತನ್ನ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ವಾರ್ಷಿಕ ವರದಿಯಲ್ಲಿ, ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ವರದಿಯನ್ನು ಉಲ್ಲೇಖಿಸಿ ಅದು ಯಾವುದೇ ವೈಫಲ್ಯವನ್ನು ಕಂಡುಕೊಂಡಿಲ್ಲ ಎಂದು ಹೇಳಿದ್ದರು.