ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯ ದಿನದಂದು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗೌರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಗೌರಿ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ವಿಶೇಷವಾಗಿ ಮುತ್ತೈದೆಯರು ಮಾಡುವ ಹಬ್ಬ ಇದು. ಸಕಲ ಸೌಭಾಗ್ಯಕ್ಕೆ ಪ್ರಾರ್ಥನೆ ಮಾಡಿ ಈ ಹಬ್ಬ ಮಾಡಲಾಗುತ್ತದೆ. ಸ್ವರ್ಣ ಗೌರಿ ವೃತದ ಮೂಲಕ ಆಚರಣೆ ಮಾಡಲಾಗುತ್ತದೆ. ಬೆಳಿಗ್ಗೆ ಬೇಗ ಎದ್ದು ತಲೆ ಸ್ನಾನ ಮಾಡಬೇಕು. ನಂತ್ರ ಮಡಿ ಬಟ್ಟೆಯುಡಬೇಕು. ಅರಿಶಿನಕ್ಕೆ ಹಾಲು ಹಾಕಿ ಗೋಪುರ ಮಾಡಿಕೊಳ್ಳಬೇಕು.
ಇದನ್ನು ಅರಿಶಿನದ ಗೌರಮ್ಮ ಎನ್ನುತ್ತಾರೆ. ಜಲ ಗೌರಿ ಪೂಜೆ ಕೂಡ ಮಾಡಬಹುದು. ಬಿದಿರಿನ ಮೊರ, ಬಾಳೆ ಎಲೆ, ಅಕ್ಕಿ 1 ಕಪ್, ತೊಗರಿಬೇಳೆ 1 ಕಪ್, ಉದ್ದಿನ ಬೇಳೆ 1 ಕಪ್, ಕಡಲೆಬೇಳೆ 1 ಕಪ್, ಹೆಸರು ಬೇಳೆ 1 ಕಪ್, ಗೋಧಿ 1 ಕಪ್, ಅಚ್ಚು ಬೆಲ್ಲ 1 ಕಪ್, ಕಲ್ಲುಪ್ಪು 1, ಹುಣಸೆಹಣ್ಣು ಸ್ವಲ್ಪ, ಅರಿಶಿನ, ಕುಂಕುಮ, ಅರಿಶಿನ ಕೊಂಬು, ಬ್ಲೌಸ್ ಪೀಸ್, ತೆಂಗಿನಕಾಯಿ, ಹಣ್ಣು, ಎಲೆ, ಅಡಿಕೆ, ಹಣ, ಕರಿಮಣಿ ಸೇರಿಸಿ ಬಾಗಿನ ಮಾಡಬೇಕು. ನಂತ್ರ ಪದ್ಧತಿಯಂತೆ ಪೂಜೆ ಮಾಡಲಾಗುತ್ತದೆ.
ಗಣೇಶ ಮನೆಗೆ ಬರುವ ಮೊದಲೇ ಗೌರಿ ಮನೆ ಪ್ರವೇಶ ಮಾಡಿರುತ್ತಾಳೆ. ಮೊದಲು ಗಣೇಶನ ತಾಯಿ ಗೌರಿಗೆ ಪೂಜೆ ನಡೆಯುತ್ತದೆ. ಮರುದಿನ ಗಣೇಶನ ಪೂಜೆ ಮಾಡಲಾಗುತ್ತದೆ. ಮಹಿಳೆಯರು ಗೌರಿಯನ್ನು ಮನೆಗೆ ತಂದು, ಬಾಳೆ ದಿಂಡು, ಮಾವಿನ ಎಲೆ, ಹೂಗಳ ಮೂಲಕ ಮಂಟಪ ನಿರ್ಮಾಣ ಮಾಡಿ ಗೌರಿಯನ್ನು ಪೂಜೆ ಮಾಡುತ್ತಾರೆ. ಗೌರಿ ಹಬ್ಬದಂದು ಗೃಹಿಣಿ ತನ್ನ ತವರಿಗೆ ಹೋಗುವ ಪದ್ಧತಿಯೂ ಅನೇಕ ಕಡೆಗಿದೆ. ಗೌರಿ ಪೂಜೆ ಮಾಡಿದ್ರೆ ಮಾಂಗಲ್ಯ ಗಟ್ಟಿಯಾಗಿರುತ್ತದೆ ಎಂಬುದು ಜನರ ನಂಬಿಕೆ. ಪೂಜೆ ನಂತ್ರ ಅಕ್ಕಪಕ್ಕದ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮ ನೀಡುವ ಪದ್ಧತಿಯಿದೆ.