ಶ್ರಾವಣ ಮಾಸ ಮುಗಿದ ನಂತರ ಬರುವ ಗೌರಿ ಹಬ್ಬ, ಹೆಣ್ಣುಮಕ್ಕಳ ಹಬ್ಬವೆಂದೇ ಪ್ರಸಿದ್ದಿ. ಗೌರಿ ಹಬ್ಬದ ಸಂದರ್ಭದಲ್ಲಿ ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಉಡುಗೊರೆ, ಬಾಗಿನ ಕೊಡಲಾಗುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರು ಮನೆಗೆ ಬರಮಾಡಿಕೊಂಡು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ.
ಶ್ರಾವಣ ಮಾಸ ಹಾಗೂ ಗೌರಿ ಹಬ್ಬವೆಂದರೆ ಹೆಣ್ಣುಮಕ್ಕಳಿಗೆ ಅಚ್ಚುಮೆಚ್ಚು. ಶ್ರಾವಣ ಮಾಸದಲ್ಲಿ ವಿವಿಧ ವ್ರತ, ಪೂಜೆ ಕೈಗೊಳ್ಳುವ ಹೆಣ್ಣುಮಕ್ಕಳು ಗೌರಿಹಬ್ಬದ ದಿನ ಗೌರಿಯನ್ನು ಪೂಜಿಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ತವರು ಮನೆಗೆ ಬಂದ ಸಂದರ್ಭದಲ್ಲಿ ಮನೆಯಲ್ಲಿ ಪೂಜೆ ಸಲ್ಲಿಸಿ ಹೊಸ ಮೊರದಲ್ಲಿ ಬಾಗಿನ ಇಟ್ಟುಕೊಂಡು ಗೌರಮ್ಮನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ.
ಶಿವನ ಪತ್ನಿ ಗೌರಿ, ತವರು ಮನೆಗೆ ಅಂದರೆ ಭೂಲೋಕಕ್ಕೆ ಬಂದಾಗ ಇಲ್ಲಿ ಮಳೆ, ಬೆಳೆ ಚೆನ್ನಾಗಿರಲಿ. ತವರು ಮನೆ ಸಮೃದ್ಧಿಯಿಂದ ಬೆಳಗಲಿ ಎಂದು ಹಾರೈಸುತ್ತಾಳೆ. ಹಾಗಾಗಿ ತವರು ಮನೆಗೆ ಬರುವ ಹೆಣ್ಣು ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಅವರು ಸಂತೋಷದಿಂದ ತವರನ್ನು ಹರಸಿದರೆ ತವರು ಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ.
ಗೌರಿ ಹಬ್ಬದ ದಿನ ಗೌರಿಯ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ಹೆಣ್ಣುಮಕ್ಕಳೆಲ್ಲಾ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮುತ್ತೈದೆಯರಿಗೆ ಬಾಗಿನ ಕೊಡುತ್ತಾರೆ. ಗೌರಿ ಮೂರ್ತಿಯನ್ನು ಪೂಜಿಸಿದ ನಂತರ ನೀರಿನಲ್ಲಿ ವಿಸರ್ಜಿಸುತ್ತಾರೆ.