ನಾಡಿನಾದ್ಯಂತ ಗೌರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎಲ್ಲೆಡೆ ಹಬ್ಬದ ವಾತಾವರಣ ಕಂಡುಬಂದಿದೆ. ವಿವಿಧ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿ ಗೌರಿಯನ್ನು ಪ್ರತಿಷ್ಟಾಪಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ನಾಳಿನ ಗಣಪತಿ ಹಬ್ಬಕ್ಕೂ ಸಹ ಸಿದ್ದತೆಗಳು ಜೋರಾಗಿ ನಡೆದಿದ್ದು, ಈಗಾಗಲೇ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಸಿದ್ದತೆ ಸಾಗಿದೆ. ಯುವಕರು ತಮ್ಮ ಏರಿಯಾದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲು ಪೆಂಡಾಲ್ ನಿರ್ಮಾಣದಲ್ಲಿ ತೊಡಗಿದ್ದಾರೆ.
ಗಣಪತಿ ಆಕರ್ಷಕ ಮಂಟಪಗಳು ಕಣ್ಮನ ಸೆಳೆಯುವಂತಿದೆ. ಮಾರುಕಟ್ಟೆಗೆ ಹತ್ತು ಹಲವು ವಿವಿಧ ಭಂಗಿಯ ಗಣಪತಿ ಮೂರ್ತಿಗಳು ಬಂದಿವೆ. ಕೆಲವು ಯುವಕರು ಈ ಮೊದಲೇ ಗಣಪತಿ ಮೂರ್ತಿಗೆ ಮುಂಗಡ ನೀಡಿ ತಮಗಿಷ್ಟವಾದ ಗಣಪತಿ ಮೂರ್ತಿಯನ್ನು ಕಾಯ್ದಿರಿಸಿದ್ದಾರೆ.
ಈಗಾಗಲೇ ಗಣಪತಿ ಮಂಟಪಗಳ ಸಿದ್ದವಾಗಿದ್ದು, ಗಣಪತಿಯ ಸ್ವಾಗತಕ್ಕೆ ಯುವಕರು ಸಜ್ಜಾಗಿದ್ದಾರೆ. ಇನ್ನು ಮನೆಗಳಲ್ಲಿಯೂ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಚಿಕ್ಕ ಗಾತ್ರದ ಗಣಪತಿ ಮೂರ್ತಿಗಳು ಬಂದಿವೆ. ಹಬ್ಬದ ಹಿನ್ನೆಲೆಯಲ್ಲಿ ಇಂದೂ ಕೂಡ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಹೂ, ಹಣ್ಣು, ಬಾಳೆದಿಂಡು ಇನ್ನಿತರ ಪೂಜಾ ಸಾಮಾಗ್ರಿಗಳ ಖರೀದಿ ಭರಾಟೆ ಬಲು ಜೋರಾಗಿಯೇ ನಡೆದಿದೆ.